ಮೊಸರಲ್ಲಿ ಕಲ್ಲು ಹುಡುಕುವುದೇ ಬಿಜೆಪಿಗರ ಕೆಲಸ

udp-lakshmi
Published on

ಉಡುಪಿ: ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 5ರಷ್ಟು ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಈ ವಿಷಯದಲ್ಲಿ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷಿ$್ಮ ಹೆಬ್ಬಾಳಕರ್​ ಕಿಡಿ ಕಾರಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜಕಾರಣ ಮಾಡಲು ಬೇರೆ ವಿಚಾರ ಉಳಿದಿಲ್ಲ. ಮೊದಲು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದರು. ಗ್ಯಾರಂಟಿ ಯೋಜನೆಗಳು ಯಶಸ್ವಿ ಆಗುವುದಿಲ್ಲ ಎಂದಿದ್ದಾರೆ. ಇದೀಗ ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿವೆ. ಜನರ ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತದೆ. ಮಾತನಾಡಲು ಅವರಿಗೆ ಬೇರೇನೂ ಉಳಿದಿಲ್ಲ ಎಂದು ದೂರಿದರು.

ಶಾಸಕರ ಆಕ್ಷೇಪಕ್ಕೆ ತಿರುಗೇಟು

ಒಂದು ಕಡೆ ಬಿಜೆಪಿ ಕೋಮುವಾದವನ್ನು ಪ್ರಚೋದನೆ ಮಾಡುತ್ತದೆ. ಇನ್ನೊಂದು ಕಡೆ ಕೋಮು ನಿಗ್ರಹದಳಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇಂಥ ಮನೋಭಾವನೆಯ ಬಿಜೆಪಿ ಶಾಸಕರನ್ನು ನೋಡಿದರೆ ಅವರ ಮನಸ್ಥಿತಿ ಏನು ಅನ್ನೋದು ಉಡುಪಿಯ ಜನತೆಗೆ ಅರ್ಥವಾಗುತ್ತೆ ಎಂದು ಕಿಡಿ ಕಾರಿದರು.

ಸೂಲಿಬೆಲೆ ಸುಳ್ಳಿನ ಚಕ್ರವರ್ತಿ

ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್​ಎಸ್​ ಯುಐ ಅಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ, ಭಗವದ್ಗೀತೆ, ಮಹಾಭಾರತ ಹೇಳುತ್ತಾರೆ. ಆದರೆ ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ವಾಕ್​ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಕಾಂಗ್ರೆಸ್​ ಪಕ್ಷ ಕೊಟ್ಟಿದೆ. ಇಡೀ ದೇಶದ ಇತಿಹಾಸದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದ ಪಕ್ಷ ಕಾಂಗ್ರೆಸ್​. ನಾವು ಚಕ್ರವರ್ತಿ ಸೂಲಿಬೆಲೆ ಅವರಿಂದ ಪಾಠ ಕೇಳಬೇಕಾಗಿಲ್ಲ. ಖಂಡಿತವಾಗಿ ಸೂಲಿಬೆಲೆ ತಮ್ಮ ಪ್ರವಾಸ ಮಾಡಬಹುದು. ದ್ವೇಷದ ಭಾಷಣ, ಸುಳ್ಳು ಬಿತ್ತುವ ಕೆಲಸ, ವಿಷಬೀಜ ಬಿತ್ತುವ ಕೆಲಸ ಮಾಡುವುದು ಬೇಡ. ಉಡುಪಿ ಶಾಂತಿ ಪ್ರಿಯರ ಜಿಲ್ಲೆ ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳಕರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net