

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಿರ್ಮಿಸಲಾಗಿರುವ ಚಿಗರಿ ಕಾರಿಡಾರ್ ನಲ್ಲಿ ಇತರೆ ವಾಹನಗಳು ಸಂಚರಿಸಲು ಅವಕಾಶ ನೀಡಬೇಕೆಂಬ ಆಗ್ರಹ ಇದೆ. ಆದರೆ, ಹೀಗೆ ಮಾಡಲು ಬರುವುದಿಲ್ಲ. ಸುಗಮ ಸಂಚಾರಕ್ಕೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ನಗರದ ಹೊಸೂರ್ ಸರ್ಕಲ್ ನಿಂದ ಧಾರವಾಡ ವರೆಗೆ ಶನಿವಾರ ಬಿಆರ್ ಟಿಎಸ್ ಚಿಗರಿ ಬಸ್ ನಲ್ಲಿ ಪ್ರಯಾಣ ಮಾಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರವಾಡ ಜಿಲ್ಲೆಯ ಶಾಸಕರು, ಚಿಗರಿ ಪ್ರಯಾಣಿಕರು, ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದುಕೊಂಡು ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಜರುಗಲಿದೆ ಎಂದರು.
ಅವಳಿನಗರದಲ್ಲಿ ಬಿಆರ್ ಟಿಎಸ್ ಕಾರಿಡಾರ್ ಹಾಗೂ ಬಸ್ ಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ವ್ಯವಸ್ಥೆ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಮೀಕ್ಷೆ ನಡೆಸಲಾಗುತ್ತಿದೆ. ಇದೀಗ ಬಸ್ ನಲ್ಲಿ ಸಂಚರಿಸಿ ಪ್ರಯಾಣಿಕರ ಅಹವಾಲು ಆಲಿಸಲಾಗಿದೆ. ಜನರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಪತ್ರ ಬರೆದು ತಿಳಿಸಲಾಗುವುದು ಎಂದರು.
ಚಿಗರಿ ಬಸ್ ಗಳು ಹಳೆಯವಾಗಿದ್ದು, ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ಇವುಗಳ ಸರಿಯಾದ ನಿರ್ವಹಣೆ ಮಾಡಲು ಸೂಚಿಸಲಾಗುವುದು. ಹೊಸ ಬಸ್ ತರಲು ಪ್ರಯತ್ನ ನಡೆಯುತ್ತಿವೆ. ಒಟ್ಟಾರೆ, ವ್ಯವಸ್ಥೆ ಸುಧಾರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಎಬಿವಿಪಿ ಮನವಿ: ಸಚಿವ ಸಂತೋಷ ಲಾಡ್ ಅವರು ಬಿಆರ್ ಟಿಎಸ್ ಬಸ್ ನಲ್ಲಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಿದರು. ಚಿಗರಿ ಬಸ್ ಹಾಗೂ ಕಾರಿಡಾರ್ ನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿಯ ವಿದ್ಯಾನಗರ ಬಿವಿಬಿ ಎದುರು 100 ಸಂಖ್ಯೆಯ ಚಿಗರಿ ಬಸ್ ಗಳಿಗೆ ನಿಲುಗಡೆ ಕಲ್ಪಿಸಬೇಕು. ಇನ್ನಷ್ಟು ಸ್ಥಳಗಳಲ್ಲಿ ಪ್ಲೆಓವರ್ ನಿರ್ಮಿಸಬೇಕು ಹಾಗೂ ಬಸ್ ಗಳಿಗೆ ಸ್ಪೀಡ್ ಲಿಮಿಟ್ ನಿಗದಿಪಡಿಸಿ ಅನಾಹುತ ತಪ್ಪಿಸಬೇಕು ಎಂಬುದು ಸೇರಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅಗತ್ಯ ಪರಿಹಾರಗಳನ್ನು ಒದಗಿಸುವ ಭರವಸೆ ನೀಡಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ್ ಹೆಗಡೆ, ಪ್ರಾಂತ ಹಾಸ್ಟೆಲ್ ವಿದ್ಯಾರ್ಥಿ ಪ್ರಮುಖ ವಿಕ್ರಂ ಗಲಾಂಡೆ, ತಾಲೂಕು ಸಂಚಾಲಕ ಅನಮೋಲ್ ಕಲಬುರ್ಗಿ, ನಗರ ಸಹ ಕಾರ್ಯದರ್ಶಿ ಮನೋಜ್, ಲೋಕೇಶ ಇತರ ಕಾರ್ಯಕರ್ತರು ಇದ್ದರು