

ಧಾರವಾಡ: ಜಿಲ್ಲೆಯಲ್ಲಿ ಅತಿಯಾದ ಮಳೆಯಾಗುತ್ತಿದ್ದು, ಮುಂಗಾರು ಬಿತ್ತನೆ ಇಲ್ಲದೆ ಜನ ತೊಂದರೆಯಲ್ಲಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಹಳ್ಳಿಗಳಿಗೆ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಬೇಕು. ಸರ್ಕಾರದಿಂದ ಅಗತ್ಯ ನೆರವು ನೀಡಬೇಕು ಎಂದು ಕಾರ್ಮಿಕ ಸಚಿವ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಮನೆ ಹಾನಿ ಪ್ರಕರಣಗಳನ್ನು ಸ್ವತಃ ಭೇಟಿ ನೀಡಿ ಪರಿಶೀಲಿಸಬೇಕು. ಜನರ ಸಂಚಾರಕ್ಕೆ, ವಿದ್ಯಾರ್ಥಿಗಳ ಓಡಾಟಕ್ಕೆ ಅಡಚಣೆ ಆಗಿರುವ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಬೇಕು. ಕೃಷಿ ಇಲಾಖೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ರೈತರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಬೇಕು. ಬಿತ್ತಿದ ಬೆಳೆ ನಿರ್ವಹಣೆ, ಹಿಂಗಾರು ಬಿತ್ತನೆಗೆ ಅಗತ್ಯ ಸಲಹೆ ನೀಡಿ ರೈತರಿಗೆ ನೆರವಾಗಬೇಕು. ರಾಜ್ಯ ಸರ್ಕಾರದ ಯೋಜನೆ, ಸಬ್ಸಿಡಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂದರು.
ಜಲ್‌ಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಬೇಗ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಎಲ್ಲ ಅರ್ಹ ಲಾನುಭವಿಗಳಿಗೆ ತಲುಪುವಂತೆ ಕ್ರಮ ವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪ್ರವಾಸ ಹಾಗೂ ಗ್ರಾಮ ಭೇಟಿ ವಿವರಗಳನ್ನು ಪ್ರತಿ ವಾರ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸುತ್ತೇನೆ ಎಂದರು.