

ಹುಬ್ಬಳ್ಳಿ : ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 4.15 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಮತ್ತು ವೆಟ್ವೆಲ್ ನಿರ್ವಿುಸುವ ಮೂಲಕ ಈ ಭಾಗದ ಪ್ರಮುಖ ಸಮಸ್ಯೆ ಬಗೆಹರಿದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಪೂರ್ವ ವಿಧಾನಸಭೆ ಕ್ಷೇತ್ರದ 73ನೇ ವಾರ್ಡ್ನ ನೇಕಾರ ನಗರ, ಹನ್ಪಿಟೌನ್ನಲ್ಲಿ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಮೂರು ಎಂ.ಎಲ್.ಡಿ. ಸಾಮರ್ಥ್ಯ ವೆಟ್ವೆಲ್ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಜಟೀಲ ಸಮಸ್ಯೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ಬಗೆಹರಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಪೂರ್ವ ಕ್ಷೇತ್ರದಲ್ಲಿ ಅಧಿಕ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೂರ್ವ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ವಾಣಿಪ್ಲಾಟ್, ಬೇಪಾರಿ ಪ್ಲಾಟ್, ವೆಂಟಕೇಶ್ವರ ಕಾಲನಿ, ಹನ್ಪಿಟೌನ್, ರಾಘವೇಂದ್ರ ಕಾಲನಿ, ಭಾರತ ಕಾಲನಿ, ಸಂತೋಷ ನಗರದಲ್ಲಿ ಉತ್ಪತ್ತಿಯಾಗುವ ಸಲ್ಲೇಜ್ ಮತ್ತು ಸೀವೆಜ್ ಸಾಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಈ ಭಾಗದಲ್ಲಿ ಜನರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದರು. ರಾಜಕಾಲುವೆ ಕೂಡ ಈ ಕಾಲನಿಗಳಿಗಿಂತ ಎತ್ತರ ಪ್ರದೇಶದಲ್ಲಿದೆ. ಸಾಕಷ್ಟು ಪ್ರಯತ್ನದ ನಂತರ ಈ ಸಮಸ್ಯೆ ಬಗೆಹರಿದಂತಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಮಹಾಪೌರರಾದ ವೀಣಾ ಬರದ್ವಾಡ, ಪಾಲಿಕೆ ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಉಪಮಹಾಪೌರ ಸತೀಶ ಹಾನಗಲ್, ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕುಂಟ್ಲ್ಲ ಶಿವು ಮೆಣಸಿನಕಾಯಿ, ಶಿವು ಹಿರೇಮಠ, ಡಿಸಿಸಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಮುಖಂಡರಾದ ಅನ್ವರ್ ಮುಧೋಳ, ಮಹೇಂಧ್ರ ಸಿಂಘಿ, ಶಫಿ ಮುದ್ದೇಬಿಹಾಳ, ರಾಜಶೇಖರ ಮೆಣಸಿನಕಾಯಿ ಹಾಗೂ ಇತರರು ಇದ್ದರು.