

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಯ ಕಲ್ಪನೆ ಹೊಂದಿರುವ ಆಕಾಂಕ್ಷಿಗಳಿಗೆ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ನೀಡಲಿದ್ದು ರಾಜ್ಯದಲ್ಲಿ ಶೇ.80ಕ್ಕಿಂತ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ರಾಜ್ಯಮಟ್ಟದಲ್ಲಿ ಹಲವು ತಂಡಗಳನ್ನು ರಚಿಸಿ ಗ್ರಾಮ ಸ್ವರಾಜ್ಯ ಅಭಿಯಾನ ನಡೆಸಲಾಗುತ್ತಿದ್ದು ಅದರ ಭಾಗವಾಗಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಸಮಾವೇಶ ನಡೆಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಯುವಕರಿಗೆ ಮತ್ತು ಹಿರಿಯರಿಗೆ ಆದ್ಯತೆ ನೀಡಲಾಗುವುದು. ಪಕ್ಷದ ಚಿಹ್ನೆ ಇಲ್ಲದಿದ್ದರೂ ಗ್ರಾಮೀಣಾಭಿವೃದ್ಧಿ ಕಲ್ಪನೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ರಸ್ತೆ ಅಭಿವೃದ್ಧಿಗೆ 1,500 ಕೋಟಿ ರೂ., ನರೇಗಾ ಯೋಜನೆಯಡಿ 100 ದಿನಗಳಿಂದ 150 ದಿನಗಳಿಗೆ ವಿಸ್ತರಿಸಿದ್ದ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.