

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತ ನ್ಯಾಯಾಲಯಕ್ಕೂ ಬೆಲೆ ಕೊಡವುದಿಲ್ಲ, ಅತ್ತ ದೇಶದ ಜನರ ಭಾವನೆಗಳಿಗೂ ಬೆಲೆ ಕೊಡುವುದಿಲ್ಲ. ಹೀಗಾಗಿ ಏನು ಮಾಡುವುದು ತಿಳಿಯುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವ್ಯಂಗ್ಯವಾಗಿ ಹೇಳಿದ್ದಾರೆ.
ಶನಿವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ರಾಮ ಮಂದಿರ ನಿರ್ಮಾಣದ ಲೆಕ್ಕ ಕೇಳುವ ಅಧಿಕಾರವಿಲ್ಲ. ಸಿದ್ದರಾಮಯ್ಯ ಮೊದಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಲೆಕ್ಕ ಕೇಳಲಿ. ಹಣ ಸಂಗ್ರಹ ಮಾಡ್ತಿರೊದಕ್ಕೆ ಡೋನೆಷನ್ ಅಂತಾ ಕರೆಯುವುದಿಲ್ಲ, ಇದು ನಿಧಿ ಸಮರ್ಪಣ ಕಾರ್ಯ. ಜನರು ಸ್ವಯಂಪ್ರೇರಿತವಾಗಿ ಮುಂದೆ ಬಂದು ನಿಧಿ ನೀಡುತ್ತಿದ್ದಾರೆ ಎಂದರು.
ಸಿದ್ರಾಮಯ್ಯ ಹೇಳಿಕೆಗೂ, ದೇಶದ್ರೋಹಿ ಪಿ.ಎಫ್.ಐ ಹೇಳಿಕೆಗೂ ವ್ಯತ್ಯಾಸ ಇಲ್ಲ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಹಾಗಾಗಿ ಹಣ ಕೊಡಲ್ಲ ಎಂದಿದ್ದಾರೆ. ಅಂಬೇಡ್ಕರ್ ಬಿಟ್ರೆ ನಾನೇ ಸಂವಿಧಾನ ತಿಳಿದುಕೊಂಡಿದ್ದು ಅಂತ ಹೇಳಿಕೊಂಡವರು. ರಾಮಮಂದಿರ ರಾಜಕೀಯಕ್ಕೆ ಬಳಸಿಕೊಂಡು ಜನರ ಭಾವನೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಡಿ.ಕೆ ಹೇಳಿಕೆಗೂ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿ, ಕುಮಾರಸ್ವಾಮಿಗೆ ಯಾರಾದ್ರೂ ಧಮಕಿ ಹಾಕಿದ್ರೆ ದೂರು ಕೊಡಲಿ. ದೇಶದಲ್ಲಿ ಯಾರೊಬ್ಬ ಹಣ ಕೊಡದವರ ಮನೆಗೆ ಮಾರ್ಕ ಮಾಡಿಲ್ಲ. ಹಣ ಕೊಟ್ಟವರುಗೆ ರಸಿದಿ ನೀಡಲಾಗುತ್ತಿದೆ ಅದನ್ನು ಕೆಲವರು ಮನೆಗೆ ಹಚ್ಚಿಕೊಂಡಿರಬಹುದು. ಮಾಜಿ ಸಿಎಂಗಳಿಬ್ಬರೂ ಘನತೆಗೆ ತಕ್ಕಂತೆ ಮಾಡನಾಡೋದು ಕಲಿಯಲಿ ಎಂದು ತಿರುಗೇಟು ನೀಡಿದರು.
ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಅನೇಕ ಜಾತಿಯವರು ಮೀಸಲಾತಿ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಕೇಳುವ ಹಕ್ಕಿದೆ. ಮೀಸಲಾತಿ ಕೇಳಿದ ತಕ್ಷಣ ಸಿಗುವುದಿಲ್ಲ ಅದರ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಅರ್ಹತೆ ಇರೋ ವರ್ಗಗಳಿಗೆ ಮೀಸಲಾತಿ ಸಿಕ್ಕೆ ಸಿಗುತ್ತೆ ಎಂದರು.