

ಕೋಲಾರ: ಕೋಲಾರ ತಾಲೂಕು ಚೌಡದೇನಹಳ್ಳಿಯಲ್ಲಿ ಆಯೋಜಿಸಿರುವ ಊರಹಬ್ಬ ಹಾಗೂ ದೊಡ್ಡದ್ಯಾವರ ಮಹೋತ್ಸವದ ಮೂರನೇ ದಿನವಾದ ಭಾನುವಾರ ವಿವಿಧ ದೇವರಿಗೆ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಂದಾಯ ಸಚಿವ ಕೃಷ್ಣಬೈರೇಗೌಡ ಕುಟುಂಬದೊಂದಿಗೆ ಆಗಮಿಸಿ ವಿಶೇಷ ಪೂಜಾ ಸಲ್ಲಿಸಿದರು. ನಂತರ ಬೆಂಬಲಿಗರು ಹಾಗೂ ಯುವಕರ ಒತ್ತಾಯದ ಮೇರೆಗೆ ತಮಟೆ ಬಡಿದು, ಡೊಳ್ಳು ಬಾರಿಸಿದರು. ಜತೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸಚಿವರು ಕೂಡ ತಮಟೆ ಸದ್ದಿಗೆ ಹೆಜ್ಜೆ ಹಾಕಿದರು.
ಈ ಹಿಂದೆ 1996ರ ಏ.25 ರಿಂದ ಮೇ 1 ರವರೆಗೆ ಗ್ರಾಮದಲ್ಲಿ ದ್ಯಾವರ ಜಾತ್ರೆ ನಡೆಸಲಾಗಿತ್ತು. 29 ವರ್ಷಗಳ ನಂತರ ಗ್ರಾಮದಲ್ಲಿ ಮತ್ತೆ ಊರಹಬ್ಬವನ್ನು ಏ.18 ರಿಂದ ಆರಂಭೊಂದು 23 ರವರೆಗೆ ಹಮ್ಮಿಕೊಳ್ಳಲಾಗಿದೆ. ಭಾನುವಾರ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಕರಗದಮ್ಮ, ಮಾರೆಮ್ಮ, ನಲ್ಲಗಂಗಮ್ಮ, ಸಪಲಮ್ಮ, ಸಪ್ತ ಮಾತೃಕೆ ದೇವಿಯವರಿಗೆ ದೀಪೋತ್ಸವ ನಡೆಸಿದರು.