ಕಾನೂನು ಪ್ರಕಾರ ಅರ್ಚಕರ ನೇಮಕ

datta jayanti
Published on

ಚಿಕ್ಕಮಗಳೂರು: ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಭಕ್ತರ ಬೇಡಿಕೆಯಂತೆ ಅರ್ಚಕರ ನೇಮಕಕ್ಕೆ ನ್ಯಾಯಸಮ್ಮತ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶ್ರೀ ದತ್ತಮಾಲೆ ಅಭಿಯಾನ ಅಂಗವಾಗಿ ಭಾನುವಾರ ದತ್ತಪೀಠದಲ್ಲಿ ಮಹಿಳೆಯರು ಹಮ್ಮಿಕೊಂಡಿದ್ದ ಅನಸೂಯಾ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರ ಜತೆ ಮಾತನಾಡಿದರು.

ಕಾನೂನು ಚೌಕಟ್ಟಿನಲ್ಲಿ ಹೊಸ ಸಮಿತಿ ನೇಮಕ ಮತ್ತು ಅರ್ಚಕರ ನೇಮಕಕ್ಕೆ ಅಡ್ವೋಕೇಟ್ ಜನರಲ್ ಅವರೊಂದಿಗೆ ರ್ಚಚಿಸುತ್ತೇನೆ. ನ್ಯಾ. ನಾಗಮೋಹನ್​ದಾಸ್ ನೇತೃತ್ವದ ಸತ್ಯಶೋಧನೆ ಹೆಸರಿನಲ್ಲಿ ಸುಪ್ರೀಂಕೋರ್ಟ್​ಗೆ ವರದಿ ನೀಡಿದೆ. ಈ ಕುರಿತು ಯಾರಾದರೂ ಪ್ರಶ್ನಿಸುವುದಿದ್ದರೆ ಹೈಕೋರ್ಟ್​ನಲ್ಲಿ ಪ್ರಶ್ನಿಸಬಹುದೆಂದು ಸುಪ್ರೀಂಕೋರ್ಟ್ ಆದೇಶಿಸಿದೆ ಎಂಬ ಮಾಹಿತಿಯಿದೆ. ಹಾಗಾಗಿ ಆ ವರದಿಯಲ್ಲಿರುವ ಸತ್ಯಾಂಶವೇನು? ಸತ್ಯಶೋಧನೆ ವರದಿ ಸತ್ಯವಾಗಿದೆಯೇ? ಯಾರನ್ನು ಭೇಟಿ ಮಾಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಬೇಕಿದೆ. ಹೊಸ ಸಮಿತಿ ನೇಮಕವಾಗಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಅರ್ಚಕರ ನೇಮಕ ತೀರ್ವನಿಸಲು ಮಾತ್ರ ಸುಪ್ರೀಂಕೋರ್ಟ್ ಅಧಿಕಾರ ನೀಡಿತ್ತು. ಆದರೆ ಆ ತೀರ್ಪಿಗೆ ವಿರುದ್ಧವಾಗಿ ನಾಗಮೋಹನ್​ದಾಸ್ ಸಮಿತಿ ರಚಿಸಿದ್ದಾರೆ. ಸಮಿತಿ ಮಾಡುವ ಆದೇಶ ಕೋರ್ಟ್ ನೀಡಿರಲಿಲ್ಲ ಎಂದು ತಿಳಿಸಿದರು.

ಬಾಬಾಬುಡನ್ ದರ್ಗಾದಲ್ಲಿ ಇಮಾಮ್ ಮೌಲ್ವಿ ಯಾರಾದರೂ ಪೂಜೆ ಮಾಡಿದರೆ ಹಿಂದುಗಳ ತಕರಾರಿಲ್ಲ. ಆದರೆ ದತ್ತಾತ್ರೇಯ ಆರಾಧನೆ ಹಿಂದು ಧಾರ್ವಿುಕ ವಿಧಿ ಪ್ರಕಾರ ನಡೆಯಬೇಕು ಎಂಬುದು ಬಹುದಿನಗಳ ಬೇಡಿಕೆ. ಕಾಶ್ಮೀರ, ಅಯೋಧ್ಯೆ ಸೇರಿ ದೇಶದ ವಿಷಯದಲ್ಲಿ ಹಿಂದೆ ಸರಿದಿಲ್ಲ. ದತ್ತಪೀಠ ವಿಷಯದಲ್ಲೂ ಹಿಂದೆ ಸರಿಯುವುದಿಲ್ಲ. ಮಾತೃಶಕ್ತಿ ಜಾಗೃತಿ ಮೂಲಕ ದತ್ತಪೀಠದ ಅಂತಿಮ ಹೋರಾಟದಲ್ಲಿ ವಿಜಯ ಸಾಧಿಸುವ ನಂಬಿಕೆ ನನಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net