ಹಿಂದುಳಿದ ವರ್ಗ ಮೋರ್ಚಾವಿರುವ ಏಕೈಕ ಪಕ್ಷ: ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

bjp new
Published on

ಕೋಟ: ಹಿಂದುಳಿದವರನ್ನು ಮುಖ್ಯವಾಹಿನಿ ಕರೆತಂದು ವಿಶೇಷವಾಗಿ ಅದರ ಮೋರ್ಚಾ ಅನುಷ್ಠಾನಗೊಳಿಸಿದ ಏಕ ಮಾತ್ರ ಪಕ್ಷ ಬಿಜೆಪಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಭಾನುವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ಮೋರ್ಚಾಗಳ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಪಕ್ಷ ಕಟ್ಟುವ ಕಾರ್ಯ ಮಾಡಿದ್ದೇನೆ. ಅದರ ಫಲವೆಂಬಂತೆ ಇಂದು ಒಬಿಸಿ ಹೆಮ್ಮರವಾಗಿ ಬೆಳೆದು ಹಳ್ಳಿ ಹಳಿಗಳಲ್ಲಿ ಎಲ್ಲ ವರ್ಗಗಳಿಗೂ ಆಕರ್ಷಿಸುವಂತೆ ಮಾಡಿದೆ. ನನ್ನಂತಹ ಸಾಮಾನ್ಯನನ್ನೂ ಪಕ್ಷ ಗುರುತಿಸಿ ಸ್ಥಾನಮಾನ ನೀಡಿದೆ. ಅಧಿಕಾರದಿಂದ ಪಕ್ಷ ಸಂಘಟಿಸಿ ಹಲವು ಸಭೆಗಳನ್ನು ಆಯೋಜಿಸಿ ಈ ಪರಿಸರದಲ್ಲಿ ಬಾಳೆಗಿಡವಾಗಿ ಹಲವು ಎಳೆ ಕುಡಿಗಳು ಹುಟ್ಟಿಕೊಂಡಂತೆ ಬೆಳೆಸಿ ಎಂದರು.

ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದರು. ಒಬಿಸಿ ಪ್ರಭಾರ ಅಶೋಕಮೂರ್ತಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ವಿಠ್ಠಲ ಪೂಜಾರಿ ಐರೋಡಿ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸರೇಶ್ ಶೆಟ್ಟಿ, ಮುಖಂಡರಾದ ಸುರೇಂದ್ರ ಪಣಿಯೂರು, ಅರುಣ್ ಬಾಣ, ಸತೀಶ್ ಕುಲಾಲ್, ಕರಣ್ ಪೂಜಾರಿ, ರೇಶ್ಮಾ ಉದಯ್ ಕುಮಾರ್, ಜ್ಯೋತಿ ಉದಯ್ ಪೂಜಾರಿ, ಮಣಿಕಂಠ ಕಾರ್ವಿ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಮಂಡಲ ಒಬಿಸಿ ಅಧ್ಯಕ್ಷ ಸತೀಶ್ ಕುಂದರ್ ಪ್ರಸ್ತಾವಿಸಿದರು. ಜೀವನ್ ಕುಮಾರ್ ಸ್ವಾಗತಿಸಿ, ರತ್ನಾಕರ್ ನಿರೂಪಿಸಿದರು.

ಎಪಿಎಂಸಿ ಕಾಯ್ದೆಯಿಂದ ಸ್ವತಂತ್ರ

ಕೇಂದ್ರ ಎಪಿಎಂಸಿ ಕಾಯ್ದೆಯಿಂದ ಇಡೀ ದೇಶದ ರೈತರು ಸ್ವತಂತ್ರವಾಗಿ ವ್ಯವಹರಿಸಲು ಅನುವು ಮಾಡಿಕೊಟ್ಟು ದಲ್ಲಾಳಿಗಳಿಂದ ರಕ್ಷಿಸಿದ್ದಾರೆ. ರೈತರ ಹೆಸರಿನಲ್ಲಿ ನಡೆಸುತ್ತಿರುವ ಪೊಳ್ಳು ಹೋರಾಟದ, ದೇಶ ವಿಭಜಿಸುವ ಕೆಲಸದ ವಿರುದ್ಧ ಆಕ್ರೋಶ ಹೊರಹಾಕಿದರಲ್ಲದೆ ಇಂದಿನಿಂದ ಮನೆಮನೆಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಮನದಟ್ಟು ಮಾಡಿ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ತಕ್ಕಪಾಠ ಕಲಿಸಿ ಎಂದು ಕೋಟ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net