

ಉಡುಪಿ: ಕೇಂದ್ರ ಸರ್ಕಾರದ ರಸಗೊಬ್ಬರ, ರಾಸಾಯನಿಕ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಭಾನುವಾರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಿದರು .
ಈ ಸಂದರ್ಭ ಮಾತನಾಡಿದ ಪೇಜಾವರ ಶ್ರೀಗಳು, ಸೂರ್ಯಶಕ್ತಿ ಎಲ್ಲ ರೀತಿಯಿಂದಲೂ ಭವಿಷ್ಯಕ್ಕೆ ಅತ್ಯಂತ ಭರವಸೆಯ ಇಂಧನವಾಗಿದೆ . ರಾಜ್ಯದ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಕಡೆ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಅಪೇಕ್ಷಿಸಿ, ಲಿಖಿತ ಪತ್ರವನ್ನು ಸಚಿವರಿಗೆ ನೀಡಿದರು. ಈ ಕುರಿತು ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಗೋವಿನ ಸೆಗಣಿಯಿಂದ ವಿದ್ಯುತ್ ತಯಾರಿಸುವ ಬಗ್ಗೆ ಉಲ್ಲೇಖಿಸಿದ ಶ್ರೀಗಳು, ದೇಶದಲ್ಲಿ ದೊಡ್ಡ ದೊಡ್ಡ ಗೋಶಾಲೆಗಳಲ್ಲಿ ಗೋಮಯದ ಹೇರಳ ಲಭ್ಯತೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಸರ್ಕಾರ ವ್ಯವಸ್ಥೆ ಮಾಡಿದರೆ ಉತ್ತಮ ಎಂದರು. ಬಳಿಕ ಸಚಿವರು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ವೃಂದಾವನ ದರ್ಶನ ಮಾಡಿದರು.