ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ

26MDK01
Published on

ಮಡಿಕೇರಿ:

ಕಾಡಾನೆ ಹಾವಳಿ ಸಮಸ್ಯೆಗೆ ಶಾಶ್ವತ ಇತಿಶ್ರೀ ಹಾಡಲು ಕಳೆದ ೨೦ ವರ್ಷಗಳಿಂದ ಕೈಗೊಳ್ಳದ ಕಾರ್ಯವನ್ನು ಈಗಿನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ತ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಕೊಡಗಿನ ಆನೆ ದಾಳಿ ಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ಪ್ರಸಕ್ತ ವರ್ಷ ವನ್ಯಜೀವಿ, ಮಾನವ ಸಂಘರ್ಷದಿಂದ ರಾಜ್ಯದಲ್ಲಿ ೨೫ ಮಂದಿ ಮೃತಪಟ್ಟಿದ್ದಾರೆ. ಕಳೆದ ೧೫ ದಿನಗಳಲ್ಲಿ ಕಾಡಾನೆ ದಾಳಿಗೆ ಕೊಡಗಿನಲ್ಲಿ ಮೂವರು ಬಲಿಯಾಗಿರುವುದು ದುಃಖದ ವಿಷಯ. ಜಿಲ್ಲೆಯಲ್ಲಿನ ಕಾಡಾನೆ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರ ದಿಟ್ಟಹೆಜ್ಜೆ ಇಡಲಿದೆ. ಇದಕ್ಕಾಗಿಯೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಕೊಡಗಿಗೆ ಭೇಟಿ ನೀಡಲಾಗಿದೆ.. ಜಿಲ್ಲೆಯಲ್ಲಿ ಖಾಲಿ ಇರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಶೀಘ್ರ ಅಧಿಕಾರಿ ನಿಯೋಜಿಸಲಾಗುವುದು.

ಕೊಡಗಿನಲ್ಲಿ ಸುಮಾರು ೧ ಸಾವಿರ ಆನೆಗಳಿವೆ. ಈ ಪೈಕಿ ೨೦೦ ಆನೆಗಳು ಕಾಡಿನಿಂದ ಹೊರಗೆ ಬದುಕುತ್ತಿವೆ. ವಿರಾಜಪೇಟೆ ತಾಲೂಕು ಒಂದರಲ್ಲೆ ೬೦ರಿಂದ ೭೦ ಆನೆಗಳು ಕಾಡಿನಿಂದ ಹೊರಗಿವೆ. ಆನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿ ಮೇಲೆ ದಾಳಿ ನಡೆಸುತ್ತಿವೆ. ಎಲ್ಲ ಕಡೆ ಇಲ್ಲಿ ಕಾಡಿರುವುದು ಹಾಗೂ ಕಾಫಿ ತೋಟಗಳೂ ಕಾಡಿನಂತಿರುವುದು ಇದಕ್ಕೆ ಕಾರಣ. ಈ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಬೇಕು ಎನ್ನುವ ಬೇಡಿಕೆ ಕುರಿತು ಚಿಂತಿಸಲಾಗುವುದು. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ವೈಜ್ಞಾನಿಕ ಕ್ರಮ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ಸೋಲಾರ್ ಬೇಲಿ, ಆನೆ ಕಂದಕ ಸೇರಿದಂತೆ ಆನೆ ಮಾನವ ಸಂಘರ್ಷ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲಾಗುವುದು.
ಮಾನವ ಜೀವಹಾನಿಗೆ ಕಾರಣವಾಗುತ್ತಿರುವ, ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗುವುದು. ಚೀನಿ ಹಡ್ಲು ಗಿರಿಜನ ಹಾಡಿ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆಗಳಿರುವ ಪ್ರದೇಶದಲ್ಲಿ ಪ್ರಸ್ತಾವಿತ ೨.೫ ಕಿ.ಮೀ. ಬದಲು ೫ ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಆದೇಶ ನೀಡಲಾಗುವುದು ಎಂದರು.

ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಕೆಪಿಸಿಸಿ ವಕ್ತಾರ ಸಂಕೇತ್ಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net