

ಮೈಸೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ನಾಯಕ ಸಮುದಾಯದವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದರು.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಶನಿವಾರ ನಾಯಕ ಸಮುದಾಯದ ವಿವಿಧ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪರಿವಾರ ಮತ್ತು ತಳವಾರ ನಾಯಕ ಸಮುದಾಯದ ಪರ್ಯಾಯ ಪದಗಳಾಗಿದೆ. ಆದರೆ, ಈ ಪದಗಳ ಗೊಂದಲದಿಂದ ಹಲವಾರು ಜನರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿದ್ದರು. ಈ ಗೊಂದಲವನ್ನು ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಗೆಹರಿಸಿದೆ. ಆದರೆ, ಈ ಹಿಂದೆ ಈ ಗೊಂದಲದಿಂದ ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದು, ಆ ಪ್ರಕರಣಗಳನ್ನು ಹಿಂಪಡೆಯಲು ಕ್ರಮ ವಹಿಸಲಾಗುವುದು ಎಂದರು.
ನಾಯಕ ಸಮುದಾಯದವರು ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾದರೆ ರಾಜಕೀಯವಾಗಿ ಮುಂದೆ ಬರಬಹುದು. ಯಾವುದೇ ಸಮಾಜ ರಾಜಕೀಯವಾಗಿ ಮುಂದೆ ಬರಬೇಕಾದರೆ ವಿದ್ಯೆ ಹಾಗೂ ಆರ್ಥಿಕ ಬಲದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವರು ಪ್ರಯತ್ನ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿ ನನ್ನನ್ನು ಸೋಲಿಸುವ ಕೆಲಸ ಮಾಡಿದ್ದರು. ‘ಸೋಲಿಸಿದರೆ ನನ್ನ ಮನಸ್ಸಿಗೆ ನೆಮ್ಮದಿ ಸಿಗಲಿದೆ’ ಎಂಬ ಮಾತನ್ನು ಸಹ ದೇವೇಗೌಡರು ಆಡಿದ್ದರು. ಆದರೆ, ಜನರು ನನ್ನನ್ನು ಕೈ ಬಿಡದೆ ಗೆಲ್ಲಿಸಿದರು ಎಂದರು.
ಸಣ್ಣಪುಟ್ಟ ವ್ಯತ್ಯಾಸ ವನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು. ಸಮುದಾಯದವರು ಒಂದೆಡೆ ಸೇರಿ ಸನ್ಮಾನಿಸಿರುವುದು ಸಂತೋಷ ತಂದಿದೆ. ಸಮಾಜದಲ್ಲಿ ಎಲ್ಲರು ಒಗ್ಗಟ್ಟಿನಿಂದ ಇರಬೇಕು. ಮುಂದುವರಿದ ಸಮಾಜಗಳಂತೆ ನಾವು ಸಹ ಮುಂದುವರೆಯಲು ಒಗ್ಗಟ್ಟು ಅವಶ್ಯಕ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ವಾತನಾಡಿ, ಮೂರು ದಶಕಗಳಿಂದ ನನ್ನ ತಂದೆ, ಮಾಜಿ ಶಾಸಕ ಚಿಕ್ಕಮಾದು ಅವರೊಂದಿಗೆ ಸೇರಿ ಸಮಾಜದ ಏಳಿಗೆಗೆ ಕೆ.ಎನ್. ರಾಜಣ್ಣ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದರು. ಮೈಸೂರು ಭಾಗಕ್ಕೆ ರಾಜಣ್ಣ ಅವರು ವೀರ ಮದಕರಿ ನಾಯಕ ಇದ್ದಂತೆ. ಸಮಾಜದ ಪರವಾಗಿ ನಾನು ಹಾಗೂ ರಾಜಣ್ಣ ಸದಾ ನಿಲ್ಲುತ್ತೇವೆ ಎಂದರು.
ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಮ್ಮ ರಾಜಣ್ಣ ವಾತನಾಡಿ, ನಾಯಕ ಸಮುದಾಯ ನಾಯಕತ್ವದ ಕೊರತೆ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜ ಬಲಿಷ್ಠವಾಗಬೇಕು. ಈ ಭಾಗದಲ್ಲಿ ಪರಿವಾರದ ಪಂಗಡಗಳು ಒಟ್ಟಿಗೆ ಸೇರಿ ಒಂದಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ವಾತನಾಡಿ, ರಾಜ್ಯದಲ್ಲಿ ನಾಯಕ ಸಮುದಾಯ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದರೂ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದೆ. ಚುನಾವಣೆಯಲ್ಲಿ ನಮ್ಮ ಸಮುದಾಯವನ್ನು ಬಳಸಿಕೊಂಡು ನಂತರ ಸ್ಥಾನಮಾನ ನೀಡಲು ಹಿಂದೇಟು ಹಾಕಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಏಳಿಗೆಯನ್ನು ಸಹಿಸದೆ ಕೆಲವರು ನಮ್ಮ ಸಮುದಾಯದ ಸರ್ಕಾರಿ ನೌಕರರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲ ಯಕ್ಕೆ ಜಾತಿ ಪ್ರಮಾಣ ಪತ್ರದ ವಿಚಾರವಾಗಿ ದೂರು ನೀಡುತ್ತಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಿ ಸಮುದಾಯದವರಿಗೆ ನ್ಯಾಯ ಒದಗಿಸಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಈಗಾಗಲೇ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಕ್ರಮ ವಹಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಪರಿಶಿಷ್ಟ ಪಂಗಡ ಸಮುದಾಯದವರಿಗೆ ಸಹಕಾರ ಸಂಘಗಳಲ್ಲಿ ಮೀಸಲಾತಿ ಕಲ್ಪಿಸಿ ಅಧ್ಯಕ್ಷ, ಉಪಾಧ್ಯಕ್ಷರಾಗಲು ಅವಕಾಶ ಸಿಗುವಂತೆ ತಿದ್ದುಪಡಿ ವಾಡಬೇಕು ಎಂದು ಮನವಿ ಮಾಡಿದರು.
ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊಂಗನೂರು ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಲಕಾಡು ಮಂಜುನಾಥ್, ಸಮುದಾಯದ ಮುಖಂಡರಾದ ಮಂಜು, ದೇವರಾಜ್ ಕಾಟೂರ್, ಜಗದೀರ್ಶ ಮೂರ್ತಿ, ಕೆಂಪನಾಯಕ, ರಮ್ಮನಹಳ್ಳಿ ರವಿ, ಉದ್ಬೂರು ಕೃಷ್ಣ, ಕಡಕೊಳ ನಾರಾಯಣ ಹಾಗೂ ಇತರರು ಇದ್ದರು.