

ಮೈಸೂರು: ಚುನಾವಣಾ ರಾಜಕೀಯದಿಂದ ನಾನು ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿ ಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಈಗ 75 ವರ್ಷ, ಮುಂದಿನ ಚುನಾವಣೆ ಬರುವ ವೇಳೆಗೆ ನನಗೆ 78 ವರ್ಷ ಆಗುತ್ತೆ. ಆ ಸಂದರ್ಭ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರ ಆರೋಗ್ಯದ ದೃಷ್ಟಿಯಿಂದ ಜನರ ಸೇವೆ ಮಾಡಲು ಆಗುವುದಿಲ್ಲ. ಯುವಜನರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಹಾಗಾಗಿ ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳುತ್ತೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಸಾಧನಾ ಸಮಾವೇಶದ ಕುರಿತು ಬಿಜೆಪಿ ನಾಯಕರು ಅನಗತ್ಯ ಟೀಕೆ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕೆ ಮಾಡಬೇಕು, ಹಾಗಾಗಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದರು.
‘ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಹಣ ಕೊಡುತ್ತೇವೆ ಎಂದು ನಾವು ಹೇಳಿಲ್ಲ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಆ ರೀತಿ ಹೇಳಿರೋದು ಸಾಧ್ಯತೆ ಇಲ್ಲ, ಮಾಧ್ಯಮಗಳು ಅದನ್ನು ತಿರುಚಿರಬಹುದು. ನಾನು ಕೂಡ ಸಚಿವ ಸಂಪುಟ ಸದಸ್ಯ ಇದ್ದೇನೆ. ಜನವರಿ, ಫೆಬ್ರವರಿ ತಿಂಗಳಿನಲ್ಲಿ ಆ್ಯಪ್ ಬದಲಾವಣೆಯಿಂದ ಹಣ ಪಾವತಿ ತಡವಾಯಿತು ಅಷ್ಟೆ, ಅದನ್ನು ಬಿಟ್ಟರೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ ನಿರಂತರವಾಗಿ ಹಣ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಫಲಾನುಭವಿಗಳನ್ನೇ ಕೇಳಿ ಎಂದು ಹೇಳಿದರು.
ಸಹಕಾರ ಇಲಾಖೆಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿರುವ ನೌಕರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮೈಸೂರು ಜಿಲ್ಲೆಯ ಸಹಕಾರ ಸಂಘಗಳಲ್ಲೂ ಅಕ್ರಮ ನಡೆದಿರುವ ಕುರಿತು ದೂರುಗಳು ದಾಖಲಾಗಿವೆ. ಹಲವಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಹೀಗಾಗಿ ನೇರವಾಗಿ ಕ್ರಮ ಕೈಗೊಳ್ಳಲು ಕಾನೂನಿನ ತೊಡಕುಗಳು ಇರುವ ಹಿನ್ನೆಲೆಯಲ್ಲಿ ಇಲಾಖೆ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗಿದ್ದೇವೆ. ತಿದ್ದುಪಡಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.