

ತುಮಕೂರು: ಸ್ವಾಮೀಜಿಗಳು ಹೇಳಿದ್ದಂಗೆ ಎಲ್ಲಾ ನಡೆಯುವ ಹಾಗೇ ಇದ್ದಿದ್ದರೆ ರಾಜಕಾರಣಿಗಳು ಯಾಕೆ ಇರಬೇಕಿತ್ತು. ಎಲ್ಲಾ ಸ್ವಾಮೀಜಿಗಳೇ ತೀರ್ಮಾನ ಮಾಡಬಹುದಿತ್ತಲ್ಲವಾ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪರೋಕ್ಷವಾಗಿ ಸಿಎಂ ಆಗಬೇಕೆನ್ನುವ ಪರಮೇಶ್ವರ್ ಆಸೆಗೆ ತಣ್ಣೀರೆರಚಿದರು.
ಪರಮೇಶ್ವರ್ ಸಿಎಂ ಆಗಬೇಕು ಅವಕಾಶ ಬಂದಾಗ ಅಂತಾ ಹೇಳೋನು ನಾನು. ಸ್ವಾಮಿಗಳು ಹೇಳಿದಂಗೆ ನಡೀತಾವ ರಾಜಕಾರಣ. ನಡಿಲೀ ನೋಡೋಣಾ. ಪರಮೇಶ್ವರ್ ಸಿಎಂ ಆಗಬೇಕು ಅಂತ ಸ್ವಾಮಿಗಳು ಹೇಳಿರುವುದಕ್ಕೆ ನನಗು ಬಹಳ ಸಂತೋಷ. ಹಾಗೇ ಹೇಳಿರುವ ಸ್ವಾಮೀಜಿಗಳಿಗೆಲ್ಲಾ ನಾನು ಅಭಿನಂದಿಸುತ್ತೀನಿ ಎಂದು ನಗರದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಭಿಮಾನ, ಗೌರವದಿಂದ ಹೇಳಿದ್ದಾರೆ ! : ಪರಮೇಶ್ವರ್ ಸಿಎಂ ಆಗಬೇಕು ಎಂದು ವಿವಿಧ ಮಠಾಧೀಶರು ಅಭಿಮಾನ, ಪ್ರೀತಿಯಿಂದ ಗೌರವದಿಂದ ಹೇಳಿರುವುದು ತಪ್ಪಾ? ತಪ್ಪಾಗಿದ್ರೆ ಅವರನ್ನ ಕೇಳಿ. ನನ್ನ ಹುಟ್ಟುಹಬ್ಬಕ್ಕೆ ಎಲ್ಲರೂ ಸೇರಿದ್ದು ಒಳ್ಳೆದಾಗಲಿ ಅಂತಾ ಹೇಳಿದ್ದಾರೆ ಎಂದು ಸಚಿವ ಪರಮೇಶ್ವರ್ ಹೇಳಿದರು.
ಜನರ ಅಭಿಪ್ರಾಯ ಭಿನ್ನವಾಗಿರುತ್ತದೆ. ಪ್ರೀತಿ ವಿಶ್ವಾಸದಿಂದ ಗೌರವದಿಂದ ಒಳ್ಳೆಯ ಮಾತನ್ನಾಡುತ್ತಾರೆ. ಅದು ಕೆಲವರಿಗೆ ಹಿಡಿಸಬಹುದು ಇನ್ನೂ ಕೆಲವರಿಗೆ ಹಿಡಿಸದೇ ಇರಬಹುದು. ಅದು ಸಮಾಜ. ಅಷ್ಟೊಂದು ಸ್ವಾಮೀಜಿಗಳು ಸೇರಿ ತುಮಕೂರಿನ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಆ ಮಾತು ಹೇಳಿದಾರೆ. ಅವರಿಗೆ ಅತ್ಯಂತ ಗೌರವಯುತವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.