ಮಳೆಹಾನಿಯ ನಿಖರ ಮಾಹಿತಿ ಒದಗಿಸಿ: ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ

Kcn
Published on

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ನಿಖರ ಮಾಹಿತಿ ನೀಡಬೇಕು ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮಳೆಹಾನಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರೀ ಮಳೆಯಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಿಯಾದ ಮಾಹಿತಿಯನ್ನು ಸಕಾಲಕ್ಕೆ ಒದಗಿಸದಿದ್ದರೆ, ಸರ್ಕಾರದಿಂದ ಪರಿಹಾರ ದೊರಕುವುದಿಲ್ಲ. ಇದನ್ನು ಅರ್ಥಮಾಡಿಕೊಂಡು ಪರಿಶೀಲನೆ ನಡೆಸಿ ಮಾಹಿತಿ ಒದಗಿಸಿ ಎಂದರು.
ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ, ಮಳೆಹಾನಿ ಕುರಿತ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಸರ್ಕಾರಕ್ಕೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಜನರು ಮಳೆ ಹಾನಿ ಪರಿಹಾರದಿಂದ ವಂಚಿತರಾದರೆ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಂ. ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಎಸಿಗಳಾದ ಶಿವಾನಂದಮೂರ್ತಿ, ಆರ್.ಐಶ್ವರ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net