ರೈತರ ಸಮಸ್ಯೆಗಳಿಗೆ ಸಪ್ತಾಹದಿಂದ ಪರಿಹಾರ: ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ

21 krp 02
Published on

ಕೆ.ಆರ್.ಪೇಟೆ: ರೈತರ ಸಾಕಷ್ಟು ಸಮಸ್ಯೆಗಳಿಗೆ ಕಂದಾಯ ಇಲಾಖೆಯ ಕಡತ ವಿಲೇವಾರಿ ಸಪ್ತಾಹ ಪರಿಹಾರ ನೀಡಲಿದ್ದು, ಯಾರೂ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧದ ಕಚೇರಿಯ ಆವರಣದಲ್ಲಿ ಕಂದಾಯ ಇಲಾಖೆಯ ಕಡತ ವಿಲೇವಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರನ್ನು ಅಲೆದಾಡಿಸಿದರೆ ಸುಮ್ಮನಿರುವುದಿಲ್ಲ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ವರ್ಗಾವಣೆ ಮಾಡಿಸುತ್ತೇನೆ. ರೈತರಿಂದ ಲಂಚ ಪಡೆಯುವುದಕ್ಕೆ ನಾಚಿಕೆಯಾಗುವುದಿಲ್ಲವೇ. ಸರ್ಕಾರ ನಿಮಗೆ ಸಂಬಳ ಕೊಡುತ್ತಿಲ್ಲವೇ? ಅರ್ಜಿಗಳು ನಿಮಗೆ ಬಂದ ಕೂಡಲೇ ಅವುಗಳನ್ನು ವಿಲೇವಾರಿ ಮಾಡುವುದು ಕಡ್ಡಾಯವಾಗಿದ್ದು, ಪೆಂಡಿಂಗ್ ಇಟ್ಟರೆ ಸುಮ್ಮನಿರುವುದಿಲ್ಲ. ರೈತರು ಬಂದು ನಿಮ್ಮ ದಾಖಲಾತಿಯಲ್ಲಿ ತಪ್ಪು ಮಾಡಿರುವುದಿಲ್ಲ. ನೀವುಗಳೇ ಸರಿಯಾಗಿ ಮಾಡದೆ ತಪ್ಪಾಗಿರುತ್ತವೆ. ಅವುಗಳನ್ನು ಸರಿಪಡಿಸುವ ಜವಾಬ್ದಾರಿ ನಿಮ್ಮದು ಎಂದು ಸೂಚಿಸಿದರು.

ಸಪ್ತಾಹದಲ್ಲಿ ರೈತರು ಜಮೀನಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಅರ್ಜಿ ಸಲ್ಲಿಸುವ ಮೂಲಕ ಕೆಲವೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬೇಕು. ಸೋಮವಾರದಂದು ಸುಮಾರು 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು ಸ್ಥಳದಲ್ಲಿಯೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳೆಹಾನಿ ಮತ್ತು ಮನೆಹಾನಿ ಕಡತಗಳ ವಿಲೇವಾರಿ, ಪಹಣಿ ತಿದ್ದುಪಡಿ, ಆರ್‌ಟಿಸಿ ಒಗ್ಗೂಡಿಸುವಿಕೆ, ಹೆಸರು ತಿದ್ದುಪಡಿ, ಆಕಾರ ಬಂದ್‌ನಂತೆ ತಿದ್ದುಪಡಿ, ಪಿಂಚಣಿ ಮಂಜೂರಾತಿ, ಅರ್ಜಿ ಸ್ವೀಕಾರ-ಪೌತಿಖಾತೆ ಆಂದೋಲನ, ದರಖಾಸ್ತು ಶಾಖೆಗೆ ಸಂಬಂಧಿಸಿದ ಹೊಸ ಅರ್ಜಿಗಳು ಸೇರಿದಂತೆ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ಎಂ.ವಿ.ರೂಪಾ, ಗ್ರೇಡ್-2 ತಹಸೀಲ್ದಾರ್ ವಿಖಾರ್‌ಅಹಮದ್, ಉಪತಹಸೀಲ್ದಾರ್ ಲಕ್ಷ್ಮಿಕಾಂತ್, ಗ್ರಾ.ಲೆ.ಸಂಘದ ಜಿಲ್ಲಾಧ್ಯಕ್ಷ ಹರೀಶ್, ಪುರಸಭಾ ಸದಸ್ಯ ಪ್ರಮೋದ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net