

ಧಾರವಾಡ: ಆಸ್ಟ್ರೇಲಿಯಾದ ಕಠಿಣ ಕಾನೂನಿನ ವಿರುದ್ಧ ಹೋರಾಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಗರದ ಪ್ರಿಯದರ್ಶಿನಿ ಪಾಟೀಲ ಅವರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಿಯದರ್ಶಿನಿ ತಂದೆ ಪ್ರೊ. ಎಸ್.ಎಸ್. ದೇಸಾಯಿ ಅವರೊಂದಿಗೆ ಕೆಲಕಾಲ ಚರ್ಚಿಸಿದರು. ಆಸ್ಟ್ರೇಲಿಯಾ ಸರ್ಕಾರದ ಸುಪರ್ದಿಯಲ್ಲಿರುವ ಮಕ್ಕಳನ್ನು ತಮಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ಮನವಿ ಮಾಡಿಕೊಂಡರು.
ಭೇಟಿಯ ನಂತರ ಸಚಿವ ಜೋಶಿ ಮಾತನಾಡಿ, ಟನೆಯ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರರಿಗೆ ಮಾಹಿತಿ ನೀಡಿದ್ದೇನೆ. ಪ್ರಿಯದರ್ಶಿನಿಯ ಪುತ್ರ ಮತ್ತು ಪುತ್ರಿ ಆಸ್ಟ್ರೇಲಿಯಾ ಸರ್ಕಾರದ ಸುಪರ್ದಿಯಲ್ಲಿದ್ದಾರೆ. ಅವರನ್ನು ಪಾಲಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಕಾನೂನಿನಡಿ ಕೆಲ ಅಡೆತಡೆಗಳಿವೆ. ಅದನ್ನು ಬಗೆಹರಿಸಲು ಭಾರತ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡುತ್ತದೆ. ಪ್ರಿಯದರ್ಶಿನಿ ಕುಟುಂಬಕ್ಕೆ ಕೆಲವರು ತೊಂದರೆ ನೀಡಿದ್ದಾರೆ ಎನ್ನಲಾಗಿದ್ದು, ಮೊದಲು ಮಕ್ಕಳ ಬಿಡುಗಡೆಗೆ ಆದ್ಯತೆ ಕೊಡುತ್ತೇವೆ ಎಂದರು.
ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಇತರರಿದ್ದರು.