

ಹುಬ್ಬಳ್ಳಿ: ದೇಶದಲ್ಲಿ ಭಾರತೀಯ ಆಹಾರ ನಿಗಮವು (ಎಫ್ ಸಿಐ) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಧಾನ್ಯಗಳು ಕೆಡದಂತೆ ನಿಗಾ ವಹಿಸುತ್ತಿದೆ. ಆಹಾರ ಸಂರಕ್ಷಣೆಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೇಸ್ಟೇಜ್ ಅನ್ನು ಶೇ. 0.1ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಭೈರಿದೇವರಕೊಪ್ಪ ಬಳಿಯ ಎಫ್ ಸಿಐ ಗೋದಾಮುಗಳಿಗೆ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಅನ್ನಚಕ್ರ ಫೋರ್ಟಲ್ ಹಾಗೂ ಆ್ಯಪ್ ಮೂಲಕ ಪ್ರತಿಯೊಂದನ್ನೂ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಡಿಪೋ ದರ್ಶನದ ಮೂಲಕ ಸಂಗ್ರಹ ಎಷ್ಟಿದೆ, ವಿತರಣೆ ವ್ಯವಸ್ಥೆ ಎಲ್ಲವನ್ನೂ ನೋಡಬಹುದು. ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದರಿಂದ ಯಾವುದೇ ಅಕ್ರಮಗಳಿಗೆ ದಾರಿ ಇಲ್ಲದಂತಾಗಿದೆ. ಈ ಎಲ್ಲ ಕ್ರಮಗಳಿಂದ ಸಾವಿರಾರು ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗುತ್ತಿದೆ ಎಂದರು.
ಮುಂಬರುವ ದಿನಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) 1.75 ಲಕ್ಷ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪಡಿತರ ಮೂಲಕ ನೀಡಲಾಗುವ ಐದು ಕೆಜಿ ಅಕ್ಕಿ ದುರುಪಯೋಗ ತಡೆಯುವುದು, ನಿಜವಾದ ಫಲಾನುಭವಿಗೆ ಅಕ್ಕಿ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದರೆ ಕೇಂದ್ರವು ಸಬ್ಸಿಡಿ ನಿಲ್ಲಿಸುವುದು ಸೇರಿ ಹಲವು ಶಿಸ್ತು ಕ್ರಮ ಕೈಗೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ರಾಜ್ಯ ಸರ್ಕಾರ ಸಮರ್ಪಕ ವಿತರಣೆ ಮಾಡಬೇಕು ಎಂದು ತಾಕೀತು ಮಾಡಿದರು.
ರಾಜ್ಯದಲ್ಲಿ ಆಹಾರ ಧಾನ್ಯಗಳ ಖರೀದಿ ನಡೆಯುತ್ತಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆ ಮೂಲಕ ಭತ್ತ, ರಾಗಿ ಮತ್ತು ಜೋಳವನ್ನು ರಾಜ್ಯ ಸರ್ಕಾರದ ಮೂಲಕ ಖರೀದಿಸಲಾಗಿದೆ. ಸುಮಾರು 33.4 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆ ಆಗುತ್ತಿದ್ದು, ಪ್ರಸಕ್ತ ವರ್ಷ 510 ಮೆಟ್ರಿಕ್ ಟನ್ ಖರೀದಿಯಾಗಿದೆ. ರಾಗಿ ಮತ್ತು ಜೋಳದ ಉತ್ಪಾದನೆ 9.44 ಲಕ್ಷ ಮೆಟ್ರಿಕ್ ಟನ್ ಮತ್ತು 7.72 ಲಕ್ಷ ಮೆಟ್ರಿಕ್ ಟನ್ ಇದ್ದು, ಕ್ರಮವಾಗಿ 3.45 ಲಕ್ಷ ಮೆಟ್ರಿಕ್ ಟನ್ ಹಾಗೂ 1.93 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. ಖರೀದಿ ಪ್ರಕ್ರಿಯೆಯು ಮುಂಚಿತವಾಗಿ ಪ್ರಾರಂಭವಾದಲ್ಲಿ ಖರೀದಿ ಪ್ರಮಾಣ ಹೆಚ್ಚಿಸಬಹುದು ಎಂದರು.
ಭಾರತೀಯ ಆಹಾರ ನಿಗಮದ ದಕ್ಷಿಣ ಭಾರತದ ಕಾರ್ಯನಿರ್ವಾಹಕ ಇಂಜಿನಿಯರ್ ಜೆಸಿಂತಾ ಎಲ್., ಕರ್ನಾಟಕ ರಾಜ್ಯದ ಪ್ರಧಾನ ವ್ಯವಸ್ಥಾಪಕ ಬಿ.ಒ. ಮಹೇಶ್ವರಪ್ಪ, ಉಪ ಪ್ರಧಾನ ವ್ಯವಸ್ಥಾಪಕ ದೇವೀಂದರ ಸಿಂಗ್, ಶೇಖರ್ ಅರವಿಂದ, ರಮೇಶ ನಾಯ್ಕ, ವಿಭಾಗೀಯ ವ್ಯವಸ್ಥಾಪಕ ಮಂಜುನಾಥ ಹೊಂಗಲ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ. ವ್ಯಾಸ ಭಗವಾನ್, ಮೊಹಿನುದ್ದೀನ್ ಹುಂಡೇಕರ್ ಇತರರು ಉಪಸ್ಥಿತರಿದ್ದರು.