

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್‌ನ ವಿಶೇಷ ತುರ್ತು ಚಿಕಿತ್ಸಾ ಘಟಕಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು. ನಂತರ ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಹೊಸದಾಗಿ ನಿರ್ಮಿಸಿರುವ ತುರ್ತು ಚಿಕಿತ್ಸಾ ಘಟಕಕ್ಕೆ ತಗುಲಿರುವ ವೆಚ್ಚ, ಮುಗಿದಿರುವ ಕಾಮಗಾರಿ, ಯಾವ ವಾರ್ಡ್‌ನಲ್ಲಿ ಏನಿವೆ? ಎಂಬುದನ್ನೆಲ್ಲ ಸಚಿವ ಜೋಶಿ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರಿಂದ ಮಾಹಿತಿ ಪಡೆದುಕೊಂಡರು. ಇನ್ನಷ್ಟು ಕಾಮಗಾರಿ ಬಾಕಿ ಉಳಿದಿದ್ದರೆ ಪೂರ್ಣಗೊಳಿಸಿಬಿಡಿ. ಉದ್ಘಾಟನೆ ಮಾಡಿಸಿಬಿಡೋಣ ಎಂದು ಸಚಿವರು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 150 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಹಸ್ತಾಂತರ ಮಾಡಿದ್ದೇವೆ. ಇನ್ನಷ್ಟು ಬೆಡ್‌ಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಹಾಗಾಗಿ ವಿಶೇಷ ತುರ್ತು ಚಿಕಿತ್ಸಾ ಘಟಕ ನಿರ್ಮಿಸಲಾಗಿದೆ. ಇಲ್ಲಿ 30 ಹಾಸಿಗೆ, ಐಸಿಯು, ಎಂಐಸಿಯು ಸೌಲಭ್ಯ ಇದೆ. ಒಟ್ಟು 72 ಕೋಟಿ ರೂ. ವೆಚ್ಚದಲ್ಲಿ (ಎಮರ್ಜೆನ್ಸಿ ರೆಸ್ಪಾನ್ಸ್ ಫಂಡ್ 12 ಕೋಟಿ ರೂ. ಸೇರಿ) ಈ ಘಟಕ ನಿರ್ಮಿಸಲಾಗಿದೆ. ಎಂಆರ್‌ಐ ಸ್ಕಾೃನಿಂಗ್ ಯಂತ್ರವೂ ಬಂದಿದೆ. ಮೊದಲ ಮಹಡಿ ಕಟ್ಟಡ ಕಾಮಗಾರಿ ಚೆನ್ನಾಗಿ ಆಗಿದೆ. ಅಗತ್ಯ ಇರುವುದರಿಂದ ಈ ಕಟ್ಟಡದಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಜತೆಗೆ ಮಾತನಾಡಿ, ಇನ್ನಷ್ಟು ಸಿಬ್ಬಂದಿಯನ್ನು ನೇಮಕ ಮಾಡುವಂತೆ ಹೇಳುತ್ತೇನೆ. ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಘಟಕವನ್ನು ಸದ್ಯದಲ್ಲೇ ಆರಂಭವಾಗಲಿದೆ ಎಂದರು.
ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಭಾರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ. ಇತರರು ಇದ್ದರು.