

ಹುಬ್ಬಳ್ಳಿ : ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲಿದೆ ಎಂಬ ಶಂಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ವ್ಯಕ್ತವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಆಶ್ವಾಸನೆಗಳನ್ನು ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪಕ್ಷ ಅನುಸರಿಸಿದ ಕಾಂಗ್ರೆಸ್, ಆ ಪಕ್ಷಕ್ಕೆ ಆಗಿರುವ ದುಸ್ಥಿತಿಗೆ ತಲುಪಿದೆ. ಪಂಜಾಬ್, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸಂಪೂರ್ಣ ಶೂನ್ಯವಾಗಿದೆ. ಕಾಂಗ್ರೆಸ್ಗೂ ಅದೇ ಸ್ಥಿತಿ ಬಂದಿದೆ. ದೆಹಲಿಯಲ್ಲಿಯೂ ಕಾಂಗ್ರೆಸ್ ಇದ್ದೂ ಇಲ್ಲದಂತಿದೆ ಎಂದು ವ್ಯಂಗ್ಯವಾಡಿದರು.
ಚುನಾವಣೆಗಾಗಿ ಸುಳ್ಳು ಆಶ್ವಾಸನೆ ಕೊಟ್ಟ ಕಾಂಗ್ರೆಸ್, ಜನರ ಕಣ್ಣಿಗೆ ಮಂಕುಬೂದಿ ಎರಚಿದೆ. ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ತಾನೇ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲಿಸುವುದಾಗಿ ಹೇಳುತ್ತಿದೆ ಎಂದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಿರುವ ಸರ್ಕಾರ, ಬಸ್ ಸೌಲಭ್ಯ ಒದಗಿಸಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಬಾಗಿಲಲ್ಲಿ ಜೋತಾಡುವ ಸ್ಥಿತಿ ಎದುರಾಗಿದೆ. ಸಾರಿಗೆ ಬಸ್ಗೆ ಹಾಕಲು ಡೀಸೆಲ್ ಖರೀದಿಸಲೂ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅನ್ನಭಾಗ್ಯ ಕಾಂಗ್ರೆಸ್ ಸರ್ಕಾರದ ಯೋಜನೆ ಎನ್ನುವವರಿಗೆ ಕೇಂದ್ರದಿಂದ ಅಕ್ಕಿ ಖರೀದಿಸುವ ಯೋಗ್ಯತೆಯೂ ಇಲ್ಲ. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನೇ ಅನ್ನಭಾಗ್ಯ ಯೋಜನೆಗೆ ಬಳಸಿಕೊಳ್ಳುತ್ತಿದೆ. 32 ರೂ. ಕೆಜಿಯ ಅಕ್ಕಿಯನ್ನು 28 ರೂ.ಗೆ ಕೊಡುತ್ತೇವೆ ಎಂದು ಕೇಂದ್ರ ಹೇಳಿದರೂ, ರಾಜ್ಯ ಸರ್ಕಾರ ಖರೀದಿ ಮಾಡುತ್ತಿಲ್ಲ. ಉದ್ರಿ ಕೊಡುತ್ತೇವೆ ಎಂದರೂ ಖರೀದಿಗೆ ಮುಂದಾಗುತ್ತಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಧೋರಣೆಗೆ ಬೇಸತ್ತ ಮತದಾರರು, ಜಮ್ಮು-ಕಾಶ್ಮಿರ ಹಾಗೂ ಹರಿಯಾಣದಲ್ಲಿ ಆ ಪಕ್ಷವನ್ನು ಕಿತ್ತೊಗೆದರು. ಅದೇ ರೀತಿ, ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಕಾಂಗ್ರೆಸ್ಗೆ ಸೋಲು ಖಚಿತ ಎಂದರು.
ಮತಾಂಧ ಜಮೀರ್ ಅಹ್ಮದ್ನಂತಹ ವ್ಯಕ್ತಿಗಳು ಹುಟ್ಟುಹಾಕಿರುವ ವಿವಾದ ಗಂಭೀರವಾದದ್ದು. ರೈತರ ಆಸ್ತಿಯಲ್ಲ ವಕ್ಪ್ ಹೆಸರು ಕೂಡಿಸಿದ ವಿವಾದ ಸುಪ್ರೀಂ ಕೋರ್ಟ್ವರೆಗೆ ಹೋಗುತ್ತದೆ. ರಾಜಕಾರಣಿಗಳು ಅನಧೀಕೃತವಾಗಿ ನೀಡುವ ಸೂಚನೆಗಳನ್ನು ಪಾಲಿಸಬೇಕೊ ಅಥವಾ ಬೇಡವೋ ಎಂಬ ಜ್ಞಾನ ಅಧಿಕಾರಿಗಳಿಗೆ ಇರಬೇಕು. ವಿವಾದ ಇರುವ ಜಿಲ್ಲೆಗಳ ಪ್ರತಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದರು.