ವಿವಿಧ ಕಾಮಗಾರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ

20TMK_Smartcity_JCM
Published on

ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ 6.80ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕ್ರೀಡಾರಂಗ ಅಭಿವೃದ್ಧಿ, ಕಾಂಪೌಂಡ್ ಗೋಡೆ, ಪ್ರವೇಶ ದ್ವಾರ ನಿರ್ಮಾಣ ಸೇರಿ ವಿವಿಧ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಚಾಲನೆ ನೀಡಿದರು.

ಕಾಲೇಜು ಮೈದಾನವನ್ನು ಶಾಲಾ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಒತ್ತಾಸೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಕಾಂಪೌಂಡ್ ಸುತ್ತ ಸಾರ್ವಜನಿಕರು ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿಗಳ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ 800 ಅಡಿ ವಿಸ್ತೀರ್ಣದ ಜಾಗ ಮಾಡಿಕೊಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ರಾಜ್ಯಕ್ಕೆ ಹೆಸರುವಾಸಿಯಾಗಿದ್ದ ಈ ಹೈಸ್ಕೂಲ್ ತನ್ನದೇ ಇತಿಹಾಸ ಹೊಂದಿದೆ. 25 ಎಕರೆ ಜಾಗದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮೈದಾನದಲ್ಲಿ 6.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮೈದಾನವನ್ನು 6 ದಶಕಗಳಿಂದ ಕ್ರೀಡಾ ಚಟುವಟಿಕೆಗೆ ಅನುವು ಮಾಡಿಕೊಡಲಾಗಿದೆ, ಕ್ರೀಡಾಪಟುಗಳಿಗೆ ತುಂಬಾ ಅನುಕೂಲವಾಗಿದೆ, ಸದ್ಯಕ್ಕೆ ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಖೋಖೋ, ಕಬಡ್ಡಿ ಸೇರಿ ಇತರ ಕ್ರೀಡಾ ಚಟುವಟಿಕೆಗಳಿಗೆ ಅನುವಾಗುವಂತಹ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಕಾಲೇಜು ಮತ್ತು ಮೈದಾನ ಪ್ರತ್ಯೇಕವಾಗಬೇಕು. ಮೈದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಎಂದರು.

ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ, ತಿಪಟೂರು ಶಾಸಕ ಬಿ.ಸಿ.ನಾಗೇಶ್, ಪಾಲಿಕೆ ಸದಸ್ಯೆ ಗಿರಿಜಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net