

ತುಮಕೂರು : ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಪರಸ್ಪರ ಆಲಿಂಗಿನ ಮಾಡಿಕೊಳ್ಳುವುದು ಬೇಡ. ಸಾಮೂಹಿಕ ಪ್ರಾರ್ಥನೆ ಬದಲು ಮನೆಯಲ್ಲೇ ಕುಳಿತು ಪ್ರಾರ್ಥನೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮುಸ್ಲಿಂ ಮುಖಂಡರ ಜತೆಗಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕರೊನಾ ಸೋಂಕು ಒಂದು ಸಮುದಾಯದವರಿಗೆ ಬರುವಂತಹದ್ದಲ್ಲ. ಯಾರೇ ಆಗಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು.
ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಇಲ್ಲಿ ಯಾರು ಕೂಡ ಹೊರಗಿನವರಲ್ಲ. ನಾವು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದರು.
ಕರೊನಾ ಭೀತಿ ಹಿನ್ನೆಲೆಯಲ್ಲಿ ಕೆಲವೊಂದು ಹಳ್ಳಿಗಳಿಗೆ ಒಂದು ಸಮುದಾಯದವರನ್ನು ಬಿಟ್ಟುಕೊಳ್ಳದೆ ಅವರೊಂದಿಗೆ ವ್ಯವಹಾರ ಮಾಡುವುದನ್ನೆ ಗ್ರಾಮಸ್ಥರು ನಿಲ್ಲಿಸಿದ್ದಾರೆ. ಅವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ವರ್ತಿಸಬೇಕು. ಕರೊನಾ ರೋಗದಿಂದ ಸಾಯುವವರಿಗಿಂತ ಅದರ ಭೀತಿಗೆ ಜನರು ಸಾಯುತ್ತಿದ್ದಾರೆ. ರೋಗ ಸೋಂಕಿತರಲ್ಲಿ ನಿರೋಧಕ ಶಕ್ತಿ ಕಡಿಮೆಯಾಗಿ ಜನರು ಸಾಯುತ್ತಿದ್ದಾರೆ ಎಂದು ಹೇಳಿದರು.
ಕರೊನಾ ಪರಿಸ್ಥಿತಿಯಲ್ಲಿ ವೃದ್ಧರು, ಮಕ್ಕಳು, ಗರ್ಭಿಣಿ, ಬಾಣಂತಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಕ್ಕದ ಜನರು ಕೆಮ್ಮುವಾಗ, ಸೀನುವಾಗ ಎಚ್ಚರವಹಿಸಬೇಕು. ಅಂಗಡಿ ಮುಂಗಟ್ಟು ಮತ್ತಿತರ ಸಾಮಾಜಿಕ ಸ್ಥಳಗಳಲ್ಲಿ ಸಾರ್ವಜನಿಕರು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.
ನಗರದಲ್ಲಿ ಪಿಎಚ್ ಕಾಲನಿ , ಕೆಎಚ್‌ಬಿ ಕಾಲನಿಯಲ್ಲಿರುವ ಕಂಟೈನ್ಮೆಂಟ್ ವಲಯದಲ್ಲಿ ಬಡ ಜನರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನನಿತ್ಯ ಹಾಲು ಹಾಗೂ ಆಹಾರ ಧಾನ್ಯಗಳನ್ನು ಒದಗಿಸುವಂತೆ ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಮನವಿ ಮಾಡಿದರು. ಪಾಲಿಕೆ ಮೇಯರ್ ಫರೀದಾ ಬೇಗಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮತ್ತಿತರು ಉಪಸ್ಥಿತರಿದ್ದರು.
ಪ್ರತಿಯೊಬ್ಬರ ಮೇಲೂ ನಿಗಾ: ನಗರದ ಪಿಎಚ್ ಕಾಲನಿ, ಕೆಎಚ್‌ಬಿ ಕಾಲನಿಗಳ ಕಂಟೈನ್ಮೆಂಟ್ ವಲಯದಲ್ಲಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಆದರೆ, ಬಫರ್ ವಲಯಗಳಲ್ಲಿ ಅಗತ್ಯ ವಸ್ತುಗಳ ಪೂರೈಸಲು ಅವಕಾಶವಿದೆ. ಈ ವ್ಯಾಪ್ತಿಯಲ್ಲಿರುವ ಜನರಿಗೆ ರ‌್ಯಾಂಡಮ್ ಆಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಆರೋಗ್ಯ ಸಮೀಕ್ಷೆ ನಡೆಸಿ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುತ್ತೀದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದರು.