ಅಟಲ್ ಭೂಜಲ್ ಯಶಸ್ಸಿಗೆ ಶ್ರಮಿಸಿ: ಸಚಿವ ಜೆ.ಸಿ.ಮಾಧುಸ್ವಾಮಿ

22 c n hallil Atal bhujal yojana photo new
Published on

ಚಿಕ್ಕನಾಯಕನಹಳ್ಳಿ : ಕೇಂದ್ರ ಸರ್ಕಾರದಿಂದ ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಚಿಕ್ಕನಾಯಕನಹಳ್ಳಿಯನ್ನು ಪೈಲಟ್ ತಾಲೂಕನ್ನಾಗಿಸಿರುವುದರಿಂದ ಈ ಭಾಗದ ಅಂತರ್ಜಲ ವೃದ್ಧಿಗೆ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಟಲ್ ಭೂಜಲ್ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಟಲ್ ಭೂಜಲ್ ಯೋಜನೆಗೆ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಗದಗ್, ಬೆಳಗಾಂ, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿ ಕೆಲವು ತಾಲೂಕನ್ನು ಆಯ್ಕೆಮಾಡಲಾಗಿದೆ.

ಆದ್ದರಿಂದ ತಾಲೂಕುಗಳಲ್ಲಿ ಅಂತರ್ಜಲ ಹರಿವು ಹಾಗೂ ಅದರ ವಿವಿಧ ಸ್ಥರಗಳಲ್ಲಿ ನೀರಿನ ಮಟ್ಟ ತಿಳಿದು ಅಂತರ್ಜಲ ವೃದ್ಧಿಗೆ ಅಗತ್ಯ ಅಂಕಿ ಅಂಶಗಳನ್ನು ಅರಣ್ಯ ಹಾಗೂ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬರ ಪರಿಹಾರದಲ್ಲಿ ಕೊರೆಸಿರು ಕೊಳವೆ ಬಾವಿಗಳ ಬಗ್ಗೆ ಸೂಕ್ತ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನಲ್ಲಿ ವಿವಿಧ ರೀತಿಯ ಮಣ್ಣು ಹಾಗೂ ಅಂತರ್ಜಲದ ಮಟ್ಟ ಇರುವುದರಿಂದ ಒಂದು ಗ್ರಾಪಂನಿಂದ ಇನ್ನೊಂದು ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಹರಿವು ಹಾಗೂ ಹಿಂಗುವ ಬಗ್ಗೆ ಪಂಚಾಯಿತಿಗಳು ಅಗತ್ಯ ಪರೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಿದರು. ಅಂತರ್ಜಲ ಹೆಚ್ಚಿಸಲು ಕೆಲವು ಕೆರೆಗಳ ಹೂಳು ತೆಗೆಯಬೇಕಿದ್ದು, ಈ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರಿಯಾದ ಅಂಕಿ-ಅಂಶ ನೀಡಿದರೆ ಈ ಬಗ್ಗೆ ದೆಹಲಿಯ ಸಭೆಯಲ್ಲಿ ಚರ್ಚಿಸುವೆ ಎಂದರು.

ಕರ್ನಾಟಕಕ್ಕೆ 1201.52 ಕೋಟಿ ರೂ: ಅಟಲ್ ಭೂಜಲ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಅಂತರ್ಜಲ ವೃದ್ಧಿಸಲು 6 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದರಲ್ಲಿ ಕರ್ನಾಟಕಕ್ಕೆ 1201.52 ಕೋಟಿ ರೂಪಾಯಿ ನೀಡಿದೆ. ರಾಜ್ಯದ 14 ಜಿಲ್ಲೆಯ 41 ತಾಲೂಕುಗಳ 39,703 ಚದರ ಕಿ.ಲೋ, ಒಳಗೊಂಡಂತೆ 1,199 ಗ್ರಾಪಂನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಮಾಹಿತಿ ನೀಡಿದರು. ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಂ.ಶಿವಸ್ವಾಮಿ, ಸಣ್ಣ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ನಾಗರಾಜು, ತಹಸೀಲ್ದಾರ್ ತೇಜಸ್ವೀನಿ, ಇಒ ನಾರಾಯಣಸ್ವಾಮಿ, ಜಿಲ್ಲಾಮಟ್ಟದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂ ವಿಜ್ಞಾನಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net