ಕಿತ್ತೂರ ಕರ್ನಾಟಕ ಪ್ರತ್ಯೇಕ ಅನುದಾನ ಅಗತ್ಯ,  ಈ ಭಾಗದ ಶಾಸಕರು, ಸಚಿವರಿಂದ ಸಿಎಂ ಬಳಿ ನಿಯೋಗ,  ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

IMG_20251006_175745_753.jpg
Published on

ಹುಬ್ಬಳ್ಳಿ; ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ನೀಡಿದ ಮಾದರಿಯಲ್ಲಿ ಕಿತ್ತೂರ ಕರ್ನಾಟಕ ಭಾಗಕ್ಕೂ ಅನುದಾನ ನೀಡುವುದು ಅಗತ್ಯವಿದ್ದು, ಇದಕ್ಕಾಗಿ ಈ ಭಾಗದ 34 ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುನೀಲ ಹನಮಣ್ಣವರಗೆ ಅಭಿನಂದಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಿತ್ತೂರ ಕರ್ನಾಟಕ ಭಾಗವೂ ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿಯೂ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆ ಇದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕುಳಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.

ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸಹಜವಾಗಿ ಪೈಪೋಟಿ ಇರುತ್ತದೆ. ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ. ನವೆಂಬರ್ ಕ್ರಾಂತಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಪ್ರಶ್ನಾವಳಿ ಕಡಿಮೆಯಾಗಲಿ:
ಜಾತಿ ಜನಗಣತಿಯ 60 ಪ್ರಶ್ನಾವಳಿಗೆ ಡಿಸಿಎಂ ಶಿವಕುಮಾರ ಸುಸ್ತಾಗಿ ಸರಳೀಕರಣ ಮಾಡಲು ಹೇಳಿರುವುದಕ್ಕೆ ನನ್ನದೂ ಸಹಮತ ಇದೆ. ಪ್ರಶ್ನೆಗಳನ್ನು ಕಡಿಮೆ ಮಾಡಬೇಕು. ಅಲ್ಲದೇ ಜನರು ತಮಗೆ ಇಷ್ಟ ಇರುವ ಪ್ರಶ್ನೆಗೆ ಮಾತ್ರ ಉತ್ತರಿಸಬಹುದಾಗಿದೆ. ಪ್ರಶ್ನಾವಳಿ ತಯಾರಿಸಿದ್ದು ಆಯೋಗದವರು. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅವರು ಸರ್ಕಾರಕ್ಕೆ ಎಲ್ಲವನ್ನೂ ತಿಳಿಸಬೇಕೆಂದಿಲ್ಲ ಎಂದು ಜಾರಕಿಹೊಳಿ ಹೇಳಿದರು.

ಗುಂಡಿ ಮುಚ್ಚಲು 700 ಕೋಟಿ:
ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಅ. 15ರ ನಂತರ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು. ಮೊದಲ ಹಂತದಲ್ಲಿ ಗುಂಡಿ ಮುಚ್ಚಲು 700 ಕೋಟಿ ರೂ. ನೀಡಲಾಗಿದೆ. ನಂತರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಸೂಚಿ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಾವು ನಮ್ಮ ಪಕ್ಷ ಭಾಗಿಯಾಗಿಲ್ಲ. ಕಳೆದ ಸಲ ನಮ್ಮ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿತ್ತು ಎಂದು ಉತ್ತರಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net