ಮೊದಲ ತಿಂಗಳು ಬಂದ ಗೃಹ ಲಕ್ಷ್ಮೀ ಹಣ ಎರಡು, ಮೂರನೇ ತಿಂಗಳು ಬಂದಿಲ್ಲವೇಕೆ..?

Jana Spandana
Published on

ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮೀ ಯೋಜನೆಯ ಸೌಲಭ್ಯ ಹಲವು ಮಹಿಳೆಯರಿಗೆ ತಲುಪದೇ ಇರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನಡೆಸಿದ ಜನಸ್ಪಂದನ ಸಭೆಯಲ್ಲಿ ಕಾಂಗ್ರೆಸ್ ಪ್ರಮುಖರಿಂದಲೇ ದೂರು ಕೇಳಿ ಬಂತು.
ಸಾಗರ ದರ್ಶನ ಹಾಲ್‌ನಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಶಿರಸಿಯಲ್ಲಿ ಆಗಮಿಸಿದ ಮಹಿಳೆಯೊಬ್ದಳು, ತಮಗೆ ಗೃಹ ಲಕ್ಷ್ಮೀ ಸೌಲಭ್ಯ ದೊರೆಯದ ಬಗ್ಗೆ ಹೇಳಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಮಾತನಾಡಿ, ಗೃಹ ಲಕ್ಷ್ಮೀ ಯೋಜನೆಯ ಮೊದಲ ಕಂತು ಹಲವರಿಗೆ ಬಂದಿದೆ. ಆದರೆ, ಎರಡು, ಮೂರನೆಯ ಕಂತು ಬಂದಿಲ್ಲ. ಪಡಿತರದ ಹೆಚ್ಚುವರಿ ಹಣ ಅದೇ ಖಾತೆಗೆ ಜಮಾ ಆಗುತ್ತಿದೆ. ಆದರೆ, ಗೃಹ ಲಕ್ಷ್ಮೀ ಹಣ ಜಮಾ ಆಗುತ್ತಿಲ್ಲ. ಪ್ರತಿ ದಿನ ಶಾಸಕರ ಕಚೇರಿಗೆ ನೂರಾರು ಜನ ಇದೇ ದೂರು ಹೇಳಿಕೊಂಡು ಬರುತ್ತಿದ್ದಾರೆ. ಸಮಸ್ಯೆ ಇದೆ ಗಮನಿಸಿ ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಡಿಸೆಂಬರ್ 6 ರ ಒಳಗೆ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಗೃಹ ಲಕ್ಷ್ಮೀ ಮೊದಲ ಕಂತು ಜಮಾ ಆಗಿತ್ತು, ಎರಡನೇ ಕಂತು ಎಷ್ಟು ಜನರಿಗೆ ಜಮಾ ಆಗಿದೆ ಎಂಬ ಮಾಹಿತಿಯನ್ನು ತಮಗೆ ಒದಗಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಚ್.ಎಚ್.ಕುಕನೂರು ಅವರಿಗೆ ಸೂಚನೆ ನೀಡಿದರು.
ಜನರವರಿ ಅಂತ್ಯಕ್ಕೆ ಕೇಂದ್ರಕ್ಕೆ ಪ್ರಸ್ತಾವ:
ಕೊಂಕಣ ರೈಲ್ವೆ ಯೋಜನೆಗೆ ಜಮೀನು ಕಳೆದುಕೊಂಡು 30 ವರ್ಷವಾಗುತ್ತ ಬಂದಿದೆ. ಹೆಚ್ಚುವರಿ ಪರಿಹಾರಕ್ಕಾಗಿ ಭೂ ಸ್ವಾಧೀನ ಕಾಯ್ದೆಯ ಸೆಕ್ಷನ್ 28ಎ ಅಡಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕುಮಟಾ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿಲ್ಲ. ಪದೇ ಪದೇ ಕುಮಟಾಕ್ಕೆ ಹೋಗಿ ವಾಪಾಸ್ ಬರುವುದಾಗಿದೆ. ನಮಗೆ ಕಾದು ಸುಸ್ತಾಗಿದೆ ನ್ಯಾಯ ಒದಗಿಸಿಕೊಡಿ ಎಂದು ಹಾರವಾಡ ಗ್ರಾಮಸ್ಥರು ಪಟ್ಟು ಹಿಡಿದರು. ಶಾಸಕ ಸತೀಶ ಸೈಲ್ ಮಾತನಾಡಿ, 2024 ರ ಜನವರಿ ಅಂತ್ಯದೊಳಗೆ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸೀಬರ್ಡ್ ಕಂಪೌಂಡ್‌:


ಸೀಬರ್ಡ್ ನೌಕಾ ಯೋಜನೆಯಿಂದ ಕಾರವಾರದ ತೋಡೂರಿನಲ್ಲಿ ಕಂಪೌಂಡ್ ಹಾಕಲಾಗುತ್ತಿದ್ದು, ಪುರಾತನ ದೇವಾಲಯ, ಸ್ಮಶಾನ ಮುಂತಾದ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತವಾಗಲಿದ್ದಾರೆ ಎಂದು ಚಂದ್ರಕಾಂತ ಚಿಂಚಣಕರ್ ದೂರಿದರು.ಕಾರವಾರ ಗುಡ್ಡಳ್ಳಿಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಹಣ ಮಂಜೂರಾದರೂ ಕಟ್ಟಡ ನಿರ್ಮಾಣವಾಗದ ಬಗ್ಗೆ ಸದಸ್ಯೆ ರುಕ್ಮಿಣಿ ಗೌಡ ದೂರು ನೀಡಿದರು.ಗೋವಾಕ್ಕೆ ಅಕ್ರಮ ಮರಳು ಹೋಗುತ್ತಿದೆ ಎಂದು ಎನ್.ದತ್ತಾ ದೂರಿದರು.

ಐಆರ್‌ಬಿ ಸ್ಪಂದಿಸುತ್ತಿಲ್ಲ:
ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಯಾಗಿರುವ ಬಗ್ಗೆ ಹಲವು ದೂರುಗಳು ಬಂದವು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ಐಆರ್‌ಬಿ ನಮ್ಮ ದೂರುಗಳಿಗೆ ಸ್ಪಂದನೆ ನೀಡುತ್ತಿಲ್ಲ. ಅದು ಕೇಂದ್ರ ಸಚಿವರ ಕಂಪನಿ. ನಾವು ಸಮಸ್ಯೆ ಬಗೆಹರಿಸಲು ಹೋದರೆ ಬಿಜೆಪಿಯವರು ಪ್ರತಿಭಟನೆ ಮಾಡಿದರು. ಕಂಪನಿ ಪರ ನಿಂತರು. ಆದರೆ, ನಾವು ಹೆದರುವುದಿಲ್ಲ. ಜನರ ಪರ ನಿಂತು ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇವೆ ಎಂದರು. ಶಾಸಕ ಬೀಮಣ್ಣ ನಾಯ್ಕ, ಎಡಿಸಿ ಪ್ರಕಾಶ ರಜಪೂತ, ಎಸ್‌ಪಿ ಡಾ.ಎನ್.ವಿಷ್ಣುವರ್ದನ, ಡಿಎಫ್‌ಒಗಳಾದ ಪ್ರಶಾಂತ ಕೆ.ಸಿ, ರವಿಶಂಕರ್ ಇದ್ದರು.
ಹೂಡಿಕೆದಾರರ ಸಮಾವೇಶ
ಜಿಲ್ಲೆಗೆ ಕೈಗಾರಿಕೆ ತರಲು ಹೂಡಿಕೆದಾರರ ಸಮಾವೇಶ ಮಾಡಲಾಗುವುದು. ಯಶವಂತಪುರ-ಮುರ್ಡೇಶ್ವರ ರೈಲನ್ನು ಕಾರವಾರವರೆಗೆ ವಿಸ್ತರಿಸುವ ಸಂಬಂಧ ಪ್ರಯತ್ನ ನಡೆಸಿದ್ದೇನೆ. ನೆರೆ ನಿರಾಶ್ರಿತರಿಗೆ ಮಲ್ಲಾಪುರ ಸಮೀಪ 14 ಎಕರೆ ಜಾಗ ನೋಡಿದ್ದು, ಮನೆ ಕಟ್ಟಿಸಿಕೊಡಲು ಪ್ರಯತ್ನ ನಡೆಸಲಾಗುವುದು ಎಂದು ಸತೀಶ ಸೈಲ್ ತಿಳಿಸಿದರು.
ಸಮಾಧಿಗಳಿಗೆ ಜಾಗ
ಕಳೆದ ಜನಸ್ಪಂದನ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿ ಪರಿಗಣಿಸಿ, ಜಿಲ್ಲೆಯ ಮೂರು ಕಡೆ ಕ್ರಿಶ್ಚಿಯನ್ ಸಮುದಾಯಕ್ಕೆ ಸ್ಮಶಾನ ಭೂಮಿಯನ್ನು ಒದಗಿಸಿದ್ದು, ಶತಮಾನಗಳ ಹಿಂದೆ ಉಂಬಳಿ ನೀಡಿದ್ದ ಕಾರವಾರದ ಚರ್ಚ್ ಒಂದರ ಜಾಗವನ್ನು ಹೆಸರಿಗೆ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು. ಕ್ರಿಶ್ಚಿಯನ್ ಪಾದ್ರಿಗಳು ಹಾಗೂ ಸಮುದಾಯದ ಮುಖಂಡರು ವೇದಿಕೆಯಲ್ಲಿ ಆಗಮಿಸಿ ಸರ್ಕಾರಕ್ಕೆ, ಸಚಿವರಿಗೆ ಅಭಿನಂದಿಸಿದರು.

ಇದು ಹೆಸರಿಗಷ್ಟೇ ಜನಸ್ಪಂದನವಲ್ಲ. ಇಲ್ಲಿ ಬಂದ ಪ್ರತಿ ಅರ್ಜಿ ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಾಗುತ್ತದೆ. ಪ್ರತಿ ಅರ್ಜಿಯನ್ನೂ ಬೆಗೆಹರಿಸುತ್ತೇವೆ. ಅಲ್ಲದೆ, ಕಚೇರಿಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು 10 ದಿನಗಳಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಮಂಕಾಳ ವೈದ್ಯಜಿಲ್ಲಾ ಉಸ್ತುವಾರಿ ಸಚಿವ……..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net