

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಪ್ರತಿನಿತ್ಯ ದೇಶ- ವಿದೇಶದಿಂದ ಸಾವಿರರು ಪ್ರವಾಸಿಗರು ಆಗಮಿಸುತ್ತಾರೆ. ಅದಕ್ಕೆ ತಕ್ಕಂತೆ ಹೊಸಪೇಟೆ ಹಾಗೂ ಕಮಲಾಪುರ ಭಾಗದಲ್ಲಿ ಅನೇಕ ವಿಶ್ವದರ್ಜೆ ಹೋಟೆಲ್‌ಗಳಿವೆ. ಆದರೂ, ಐಷಾರಾಮಿ ಕೊಠಡಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕಳೆದ ರಾತ್ರಿ ಮೂರು ಹೋಟೆಲ್‌ಗಳನ್ನು ಬದಲಿಸಿದ್ದಾರೆ!
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ೫೦ನೇ ವರ್ಷಾಚರಣೆ ಕುರಿತ ಪೂರ್ವ ಭಾವಿಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದರು. ಜಿಲ್ಲೆಗೆ ಆಗಮಿಸಿದಾಗಲೆಲ್ಲಾ ಸಚಿವರು ವಾಸ್ತವ್ಯ ಮಾಡುತ್ತಿದ್ದ ರಾಯಲ್ ಆರ್ಕಿಡ್‌ನಲ್ಲಿ ನಿನ್ನೆ ರೂಂ ಗಳು ಲಭ್ಯವಿರಲಿಲ್ಲ. ಹೀಗಾಗಿ ಕಮಲಾಪುರದ ಹೋಟೆಲ್ ಮಯೂರಾ ಭುವನೇಶ್ವರಿಗೆ ತೆರಳಿದ್ದರು. ಅಲ್ಲಿನ ಕೊಠಡಿಯನ್ನು ಕಂಡು ಸಚಿವ ಜಮೀರ್ ಅಹ್ಮದ್ ಖಾನ್ ಮೂಗು ಮುರಿದರು.
ಬಳಿಕ ಅಲ್ಲಿಂದ ಹೊಸಪೇಟೆಗೆ ಮರಳಿದ್ದು, ಶ್ರೀರಾಮುಲು ಪಾರ್ಕ್ ಸಮೀಪದ ಮತ್ತೊಂದು ಐಷಾರಾಮಿ ಹೋಟೆಲ್‌ಗೆ ತೆರಳಿದ್ದರು. ಅಲ್ಲೂ ಸೂಟ್(ಐಷಾರಾಮಿ ಕೊಠಡಿ)ಇಷ್ಟವಾಗದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಮತ್ತೊಂದು ಐಷಾರಾಮಿ ಹೋಟೆಲ್‌ಗೆ ಶಿಫ್ಟ್ ಆಗಿದ್ದಾರೆ. ರಾತ್ರಿ ಅಲ್ಲೇ ವಾಸ್ತವ್ಯ ನಡೆಸಿದರು ಎಂದು ಖಚಿತ ಮೂಲಗಳು ತಿಳಿಸಿವೆ.
ಸರ್ಕಾರದ ಅಧಿಕೃತ ಪ್ರವಾಸ ಪಟ್ಟಿಯಂತೆ ಸಚಿವರು ತುಂಗಭದ್ರಾ ಮಂಡಳಿಗೆ ಸೇರಿದ ವೈಕುಂಠ ಐಬಿಯಲ್ಲಿ ವಾಸ್ತವ್ಯ ನಡೆಸಬೇಕಿ ತ್ತು. ಆದರೆ, ಸಚಿವರು ಹೋಟೆಲ್‌ನಿಂದ ಹೋಟೆಲ್‌ಗೆ ಶಿಫ್ಟ್ ಆಗಿದ್ದರಿಂದ ಜನರು ಕೂಡಾ ಹೋಟಲ್‌ನಿಂದ ಹೋಟೆಲ್‌ಗೆ ಅಲೆಯುವಂತಾಯಿತು.