

ಉಡುಪಿ: ದೇಶದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಪರಿಚಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಜಿ20 ಪ್ರತಿನಿಧಿಗಳಿಗಾಗಿ ದೇಶದ 59 ನಗರಗಳಲ್ಲಿ ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ. ಕರೋನೋತ್ತರ ವಿಶ್ವದಲ್ಲಿ ಭಾರತದ ಜವಾಬ್ದಾರಿ ಹೆಚ್ಚಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಜಾಗತಿಕ ರೂಪ ಪಡೆದಿದೆ ಎಂದು ಭಾರತ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದರು.
ಭಾನುವಾರ ಕಂಟ್ರಿ ಇನ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶ ಅನೇಕ ದೇಶಗಳು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದು, ಶಿಕ್ಷಣ ಮತ್ತು ಆರೋಗ್ಯಕ್ಕೆ ವೆಚ್ಚ ಮಾಡಲೂ ಸಾಧ್ಯವಾಗುತ್ತಿಲ್ಲ. ಭಾರತ ಕೋವಿಡ್ ಸಮಸ್ಯೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದು, ವಿಶ್ವದ 5ನೇ ಆರ್ಥಿಕತೆಯಾಗಿ ಬೆಳೆಯುತ್ತಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ವಿಶ್ವದಲ್ಲಿ ಫಾರ್ಮಸಿ ಮತ್ತು ಡಿಜಿಟಲ್ ಲೀಡರ್ ಆಗಿ ಭಾರತವನ್ನು ಪರಿಗಣಿಸಲಾಗುತ್ತಿದ್ದು, ದೇಶದ ಭದ್ರತೆ ಹಿತದೃಷ್ಟಿಯಿಂದ ಡೇಟಾ ಪ್ರೈವೇಸಿ ಮತ್ತು ಡೇಟಾ ಸೆಕ್ಯೂರಿಟಿ ಪ್ರಸಕ್ತ ಸವಾಲಿನ ಕಾರ್ಯವಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತ ಯಾರ ಪರ ಅಥವಾ ವಿರುದ್ಧ ನಿಲ್ಲದೆ. ದೇಶದ ಜನರಿಗೆ ಯಾವುದು ಹಿತವೋ ಅಂಥ ನಿರ್ಧಾರಕೈಗೊಂಡಿತ್ತು. ಕೇಂದ್ರದಲ್ಲಿ ಸಮರ್ಥ ನಾಯಕತ್ವ ಇರುವ ಕಾರಣಕ್ಕೆ ಯಶಸ್ವಿಯಾಗಿದೆ. ವಿದೇಶದಲ್ಲಿ ಸಂಕಷ್ಟದಲ್ಲಿರುವ ಸಹಾಯಕ್ಕೆ ಸರ್ಕಾರ ಸದಾಸಿದ್ಧವಾಗಿದೆ. ವಂದೇ ಭಾರತ್ ಮಿಷನ್ ಇದಕ್ಕೆ ಉದಾಹರಣೆಯಾಗಿದೆ. ಅಮೇರಿಕಾ, ಚೀನಾ ಸಹಿತ ಅನೇಕ ಮುಂದುವರಿದ ದೇಶಗಳು ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಹಿಂದೇಟು ಹಾಕಿದ್ದ ಸಂದರ್ಭದಲ್ಲಿ ಭಾರತ 90 ವಿಮಾನಗಳ ಮೂಲಕ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದೆ ಎಂದು ಹೇಳಿದರು.
300 ವರ್ಷಗಳಿಂದ ನಕಾರಾತ್ಮಕ ಧೋರಣೆ
ಕಳೆದ 300 ವರ್ಷಗಳಿಂದ ಜಾಗತಿಕವಾಗಿ ಭಾರತದ ಬಗ್ಗೆ ನಕಾರಾತ್ಮಕ ಚಿಂತನೆಯನ್ನು ಹರಿಯಬಿಡಲಾಗಿದೆ. ಭಾರತದಂತಹ ಬಹುತ್ವ ಸಮಾಜದಲ್ಲಿ ಆಂತರಿಕ ಏಕತೆ ಬಲಗೊಳ್ಳಬೇಕು. ಆರ್ಥಿಕತೆಯಲ್ಲಿ ಆತ್ಮನಿರ್ಭರ್ ಆಗುವ ಜೊತೆಗೆ ಮಾನಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ವಾವಲಂಬಿಗಳಾಗಬೇಕು. ಭಾರತ ಪ್ರಜಾಪ್ರಭುತ್ವದ ಮೂಲಸ್ಥಾನ ಎಂದು ಹೇಳಿದರು.
ಅನೇಕ ದಶಕಗಳ ಕಾಲ ಮುಂದುವರಿದ ದೇಶಗಳು ಭಯೋತ್ಪಾದನೆಯನ್ನು ತಿರಸ್ಕರಿಸುತ್ತಿದ್ದವು. ನಿಮ್ಮ ಆಂತರಿಕ ಸಮಸ್ಯೆ ಎಂದು ಕಡೆಗಳಿಸುತ್ತಿದ್ದವು. ಪ್ರಸ್ತುತ ಭಯೋತ್ಪಾದಕರಿಗೆ ಆರ್ಥಿಕ ನಿರ್ಬಂಧಗಳನ್ನು ಖಾತರಿಪಡಿಸುವಲ್ಲಿ ಮತ್ತು ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಭಯೋತ್ಪಾದಕರ ಹೆಸರು ದಾಖಲಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಉರಿ ಮತ್ತು ಬಾಲಾಕೋಟ್ ಘಟನೆ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರಸ್ತುತಪಡಿಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ನಾಯಕ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಉದಯ್ ಶೆಟ್ಟಿ, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಣಾಳಿಕೆ ಸಮಿತಿ ಸಹ ಸಂಚಾಲಕ ರವೀಂದ್ರ ಪೈ ಉಪಸ್ಥಿತರಿದ್ದರು.