ಕೈಗಾರಿಕೆಗೆ ಭೂಮಿ, ವಿದ್ಯುತ್ ನೀಡಿ

web (1)
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಭೂಮಿ ಮತ್ತು ನಿರಂತರ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂದು ಹಲವಾರು ಉದ್ಯಮಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮುಂದೆ ನಿವೇದಿಸಿಕೊಂಡರು.

ಜಿಪಂ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಹುತೇಕ ಉದ್ಯಮಿಗಳು, ಕೈಗಾರಿಕಾ ವಸಾಹತುಗಳ ವಿಸ್ತರಣೆಗೆ ಮೂಲ ಸೌಕರ್ಯ ಹಾಗೂ ಹೆಚ್ಚಿನ ಪ್ರಮಾಣದ ಭೂಮಿ ಒದಗಿಸಬೇಕೆಂದು ಬೇಡಿಕೆ ಮುಂದಿಟ್ಟರು.

ಸಖರಾಯಪಟ್ಟಣದ ಒಂದೇ ಗ್ರಾಮದಲ್ಲಿ 200 ಬಗೆಯ ಹಲಸನ್ನು ಬೆಳೆಯಲಾಗುತ್ತಿದೆ. ಇಲ್ಲಿ ಟೆಕ್ಸಾಸ್ ಕಂಪನಿಯವರು ಹಲಸಿನ ಸಂಸ್ಕರಣಾ ಘಟಕ ತೆರೆಯಲು ಮುಂದೆ ಬಂದಿದ್ದಾರೆ. ಕನಿಷ್ಠ ಒಂದು ಎಕರೆ ಜಾಗವನ್ನು ಇಲಾಖೆ ಗುರುತಿಸಿಕೊಡಬೇಕು ಎಂದು ಉದ್ಯಮಿ ಸಚ್ಚಿದಾನಂದ ಕೋರಿದರು.

ಕೈಗಾರಿಕಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಆಲೋಚನೆ ಇದೆ. ಆದರೆ ಬ್ಯಾಂಕ್​ಗಳು ಸ್ಪಂದಿಸುತ್ತಿಲ್ಲ. ಅಗತ್ಯ ಹಣಕಾಸಿನ ಸಾಲ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಮೈಸೂರು ಕಾಫಿ ಟ್ರೇಡಿಂಗ್ ಕಂಪನಿಯ ರಾಮರಾವ್ ಒತ್ತಾಯಿಸಿದರು.

ಜಿಲ್ಲೆ ಕೈಗಾರಿಕೆಯಲ್ಲಿ ಹಿಂದುಳಿದಿದೆ. ಕಾಫಿ ಮತ್ತು ಕೃಷಿಗೆ ಸೀಮಿತವಾಗಿದೆ. ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಕೈಗಾರಿಕೆಗಳನ್ನು ವಿಸ್ತರಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಕೈಗಾರಿಕಾ ವಸಾಹತುವಿನಲ್ಲಿ 10 ವರ್ಷದ ಹಿಂದೆ ವಿವಾದವಾಗಿ ಪರಿಣಮಿಸಿದ ವಿಚಾರ ಪ್ರಸ್ತಾಪವಾದಾಗ, ನ್ಯಾಯಾಲಯದ ಮೆಟ್ಟಿಲೇರಿರುವ ವಿವಾದ ಸಂಬಂಧ ಕೋರ್ಟ್ ನೀಡಿರುವ ಆದೇಶ ಪ್ರತಿ ತರಿಸಿಕೊಳ್ಳದ ಇಲಾಖೆ ಅಧಿಕಾರಿಗಳ ವಿರುದ್ಧ ಶೆಟ್ಟರ್ ಗರಂ ಆದರು. ನಿಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನಿಮ್ಮ ಬಳಿ ಇಲ್ಲ ಎಂದರೆ ಹೇಗೆ ಕೆಲಸ ಮಾಡುತ್ತೀರಿ? ಇದಕ್ಕೆಲ್ಲ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಸ್ಪೈಸ್ ಪಾರ್ಕ್​ಗೆ ಎಲ್ಲ ಸಹಕಾರ: ಹೊಸಕೋಟೆ ಸಮೀಪ ಸ್ಥಾಪಿಸಲು ಉದ್ದೇಶಿಸಿರುವ ಸ್ಪೈಸಸ್ ಪಾರ್ಕ್​ಗೆ ಇಲಾಖೆಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಸ್ಪೈಸಸ್ ಪಾರ್ಕ್ ಸ್ಥಾಪನೆಯಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುವುದನ್ನು ಪರಿಗಣಿಸಿ ಹೆಚ್ಚಿನ ಉತ್ತೇಜನ ನೀಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

ಕೈಗಾರಿಕಾ ನೀತಿಯಲ್ಲಿ ಕೆಲವು ತಿದ್ದುಪಡಿ ಸೇರಿದಂತೆ ಸೆಕ್ಷನ್ 79(8ಬಿ)ಯನ್ನು ತೆಗೆದು ಹಾಕುವ ನಿರ್ಣಯ ಕೈಗೊಳ್ಳಲಾಗಿದ್ದು, ಅದಕ್ಕೆ ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ ಸಾಕಷ್ಟು ಸುಧಾರಣೆಗಳಾಗಲಿವೆ ಎಂದರು.

ಕೈಗಾರಿಕೆಗಳ ಸ್ಥಾಪನೆಗೆ ಬ್ಯಾಂಕ್​ಗಳು ಸ್ಪಂದಿಸುತ್ತಿಲ್ಲ. ಸಾಲ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿವೆ ಎನ್ನುವ ದೂರುಗಳು ಈ ಸಭೆಯಲ್ಲಿ ಕೇಳಿ ಬಂದಿವೆ. ಈ ಬಗ್ಗೆ ಬ್ಯಾಂಕರ್ಸ್​ಗಳ ಸಭೆ ಕರೆದು ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಹೇಳಿದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಐಎಡಿಬಿ ಸಿಇಒ ಶಿವಶಂಕರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಜಿಪಂ ಸಿಇಒ ಎಸ್.ಪೂವಿತಾ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net