

ತುಮಕೂರು : ಕರೊನಾ ಎರಡನೇ ಅಲೆ ಜಿಲ್ಲೆಗೆ ವ್ಯಾಪಿಸದಂತೆ ತಡೆಯಲು ಮುಂಜಾಗ್ರತಾ ನಿಯಂತ್ರಣಾ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೊನಾ ಎರಡನೇ ಅಲೆ ನಿಯಂತ್ರಣ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹರಡಿದ್ದ ಕರೊನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ, ಮೊದಲನೇ ಹಂತದ ನಿಯಂತ್ರಿಸಲು ಕೈಗೊಂಡ ಕ್ರಮಗಳಂತೆಯೇ ಎರಡನೇ ಅಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲಗೆ ಸೂಚಿಸಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆ ಸಮೀಕ್ಷೆ ನಡೆಸಿ ಜ್ವರ, ಕೆಮ್ಮು, ತಲೆನೋವು, ಶೀತ ಇವುಗಳ ಬಗ್ಗೆ ನಿಗಾವಹಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ಅವರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಕರೊನಾ ಪಾಸಿಟೀವ್ ಬಂದರೆ ಅಂತಹವರನ್ನು 14 ದಿನಗಳ ಹೋಂ ಕ್ಯಾರಂಟೈನ್ ಮಾಡಬೇಕು. ಕೇರಳ, ಮಹಾರಾಷ್ಟ್ರ ಸೇರಿ ಕರೊನಾ ಎರಡನೇ ಅಲೆ ಕಾಣಿಸಿಕೊಂಡಿರುವ ಮತ್ತಿತರ ಪ್ರದೇಶಗಳಿಂದ ಕಳೆದ 15 ದಿನಗಳಿಂದ ಜಿಲ್ಲೆಗೆ ಆಗಮಿಸಿರುವವರ ಮೇಲೆ ನಿಗಾವಹಿಸಬೇಕು ಎಂದರು. ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಪ್ರದೇಶಗಳಿಗೆ ಕೇರಳ, ಮಹಾರಾಷ್ಟ್ರ ಮತ್ತಿತರ ಸೋಂಕು ಕಂಡುಬಂದ ಪ್ರದೇಶಗಳಿಂದ ಬರುವವರ ಮೇಲೆ ನಿಗಾವಹಿಸುವಂತೆ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಇಒಗಳಿಗೆ ನಿರ್ದೇಶಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಗೆ ಸೂಚಿಸಿದರು.
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು. ವೆಂಟಿಲೇಟರ್ ಸೇರಿ ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ತುಮಕೂರು ಹಾಗೂ ತಿಪಟೂರಿನಲ್ಲಿ ವೈರಲ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಪ್ರತಿನಿತ್ಯ 1500ಕ್ಕೂ ಹೆಚ್ಚು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಲಾಗಿದ್ದು, ಅದಲ್ಲದೆ ಲ್ಯಾಬ್ ಆನ್ ಮೊಬೈಲ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು. ಎಲ್ಲ ತಾಲೂಕು ಆಸ್ಪತ್ರೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಗಂಭೀರ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯಗೆ ಸೂಚಿಸಿದರು.
ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಿಂದ ಹಳ್ಳಿಗಳಿಗೆ ಆಗಮಿಸುವವರ ಮಾಹಿತಿಯನ್ನು ಜನರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದರೆ ಸೋಂಕು ನಿಯಂತ್ರಿಸಲು ಸಹಕಾರಿಯಾಗಲಿದೆ. ಜಿಲ್ಲೆಗೆ ಸೋಂಕು ವ್ಯಾಪಿಸದಂತೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ, ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಾಹಿತಿ ನೀಡಿದರೆ ಸೂಕ್ತ. ಹಾಗಾಗಿ ಹಳ್ಳಿಗಳಲ್ಲಿ ಟಾಂಟಾಂ ಹೊಡೆಸಿ ಈ ಬಗ್ಗೆ ಜಾಗೃತಿ ಮೂಡಿಸಿ ಎಂದರು. ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಾ.ಚೇತನ್, ಡಾ.ಮಹಿಮಾ, ಡಾ.ಮೋಹನ್‌ದಾಸ್, ಜಿಪಂ ಯೋಜನಾಧಿಕಾರಿ ಬಾಲರಾಜ್ ಇದ್ದರು.
ಅಭಿವೃದ್ಧಿಗೆ 2 ಕೋಟಿ ರೂ. ಮೀಸಲು : ಜಿಲ್ಲೆಯಲ್ಲಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಉದ್ದೇಶವಾಗಿದ್ದು, ಜಿಪಂ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಗೆ ಒಳಪಡಿಸಿದರೆ ಆ ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆರೆ ಸಂರಕ್ಷಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಜಿಪಂ ವ್ಯಾಪ್ತಿಗೆ ಬರುವ ಕೆರೆಗಳ ಸರ್ವೇ ಕಾರ್ಯ ಮಾಡಿಸಿ, ಕೆರೆಗಳ ನಿರ್ವಹಣೆ ಮಾಡಬೇಕು. ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಅಭಿವೃದ್ಧಿಗೆ 2 ಕೋಟಿ ರೂ. ಮೀಸಲಿಡಲಾಗಿದ್ದು ಹಂತಹಂತವಾಗಿ ಬಳಸಿಕೊಳ್ಳಬೇಕು ಎಂದರು. ಕೆರೆಗಳಲ್ಲಿನ ಹೂಳು ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಹೂಳನ್ನು ತುಂಬಿಕೊಂಡು ಹೋಗಬಹುದು. ಹೂಳು ತುಂಬಿರುವ ಕೆರೆ ಹಾಗೂ ಅರ್ಧ ಹೂಳು ಇರುವ ಕೆರೆಗಳ ಕುರಿತು ಹಾಗೂ ಕೆರೆಗಳ ಜಲಾನಯನ ಪ್ರದೇಶದ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಗಳ ಏರಿಗಳಲ್ಲಿನ ಗಿಡಗಳನ್ನು ತೆರವುಗೊಳಿಸುವಾಗ ಏರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು, ಯಂತ್ರಗಳನ್ನು ಬಳಸಬಾರದು. ಕೆರೆಯ ರಚನೆಗೆ ದಕ್ಕೆಯಾಗದಂತೆ ಕೆರೆ ಏರಿಗಳನ್ನು ಸ್ವಚ್ಛಗೊಳಿಸುವಂತೆ ಅವರು ನಿರ್ದೇಶಿಸಿದರು. ಹಳೆ ನಿಜಗಲ್ ಕೆರೆಯಿಂದ ತುಮಕೂರು ಗ್ರಾಮಾಂತರದ 12 ಕೆರೆಗಳಿಗೆ ಟ್ರಿಟೇಡ್ ವಾಟರ್ ನೀರು ಹರಿಸಲು ಯೋಜನೆ ರೂಪಿಸಿ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.
ನಗರದ ಸುತ್ತಮುತ್ತಲಿನ ಕೆರೆಗಳಲ್ಲಿನ ಬಫರ್ ಜೋನ್‌ಗಳಲ್ಲಿ ಮನೆ ಕಟ್ಟಿದ್ದಾರೆ, ಅವರಿಗೆ ರಿಯಾಯಿತಿ ಕಲ್ಪಿಸಬಹುದೇ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾನುಸಾರ ಸಾಧ್ಯವಿಲ್ಲ, ಹಸಿರು ನ್ಯಾಯ ಪೀಠದ ನಿರ್ದೇಶನದಂತೆ ಕೆರೆಗಳ ರಕ್ಷಣೆಗಾಗಿ ಬಫರ್ ಜೋನ್ ಬಿಡಬೇಕು. ಜಿ.ಬಿ. ಜ್ಯೋತಿಗಣೇಶ್ ನಗರ ಶಾಸಕ