

ತುಮಕೂರು
ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ವರ್ಷಾಚರಣೆ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ ಹೊರತು ಸಿದ್ದರಾಮೋತ್ಸವಕ್ಕೆ ಕೌಂಟರ್ ಕೊಡಲು ಮಾಡುತ್ತಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷ ಸಂಘಟನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷದ ಸಾಧನೆ ಬಗ್ಗೆ ಎಲ್ಲಾ ಸರ್ಕಾರಗಳು ಕಾರ್ಯಕ್ರಮಗಳನ್ನು ಮಾಡಿವೆ. ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರವಹಿಸಿಕೊಂಡು ಒಂದು ವರ್ಷ. ಜನರಿಗೆ ನಮ್ಮ ಸಾಧನೆಗಳೇನು ಎಂಬುದನ್ನು ತಿಳಿಸಲಿಕ್ಕೆ ಜನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ನಾವು ಏನೇನು ಮಾಡಿದ್ದೇವೆಂದು ಜನರಿಗೆ ಹೇಳಬೇಕಲ್ಲವಾ. ವಿಪಕ್ಷದವರು ಹೇಳಿದ್ದೆ ಸರಿ ಅಂತ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳೊಕ್ಕೆ ಆಗುತ್ತಾ. ನಮ್ಮ ಪಕ್ಷದ ಸಾಧನೆಗಳು, ಬೊಮ್ಮಾಯಿ ಸಿಎಂ ಆದ ಬಳಿಕ ಏಮ್ ಸಾಧನೆ ಮಾಡಿದ್ದೇವೆ ಅಂತ ಹೇಳುತ್ತೇವೆ. ಅದನ್ನು ತಿಳಿಸಿದ ಬಳಿಕ ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದು ಜೆಸಿಎಂ ತಿಳಿಸಿದರು.
ಪ್ರವೀಣ್ ಹತ್ಯೆ ವಿಚಾರ: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಘಟನೆ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಪೂರ್ಣ ಮಾಹಿತಿ ಇಲ್ಲದೆ ಹೇಗೆ ಪ್ರತಿಕ್ರಿಯೆ ನೀಡಲಿ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ನಾನು ಮಾತನಾಡುವುದು ಸರಿಯಲ್ಲ. ಪೂರ್ಣ ಪ್ರಮಾಣದ ಮಾಹಿತಿ ತರಿಸಿಕೊಂಡು ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದರು.