

ಮೈಸೂರು: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಬೇಸಿಗೆಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾದರೆ ಅಧಿಕಾರಿಗಳು ಎದುರಿಸಲು ಸಿದ್ಧರಾಗಿರಬೇಕು ಎಂದರು.
ತಾಲೂಕು ಹಂತದಲ್ಲಿ ಟಾಸ್ಕ್ ಫೋರ್ಸ್ ರಚಿಸಿಕೊಂಡು ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕಳೆದ ವರ್ಷ ಉತ್ತಮ ಮಳೆಯಾದ್ದರಿಂದ ಈ ಬೇಸಿಗೆಯಲ್ಲಿ ಕುಡಿಯುವ ನೀರು ತೊಂದರೆ ಇಲ್ಲ. ಆದರೂ ಎಚ್ಚರಿಕೆ ವಹಿಸಬೇಕು ಎಂದರು.
ಜಾನುವಾರುಗಳಿಗೆ ಮೇವು, ನೀರಿಗೆ ಅಭಾವ ಆಗಬಾರದು. ಬೋರ್‌ವೆಲ್ ಬತ್ತಿದ್ದರೆ ಪರ್ಯಾಯ ಮಾರ್ಗದಿಂದ ನೀರು ತರಬೇಕು. ಕುಡಿಯುವ ನೀರಿಗೆ ಅಭಾವವಾಗದಂತೆ ಅಧಿಕಾರಿಗಳು ಮಾನಸಿಕವಾಗಿ ಸಿದ್ಧರಾಗಿರಬೇಕು. ಸಮಸ್ಯೆ ಕಂಡು ಬಂದ ತಕ್ಷಣ ಪರಿಹರಿಸಬೇಕು ಎಂದು ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದ ಕಾವೇರಿ ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 6 ಮತ್ತು 3 ಟಿಎಂಸಿ ಹೆಚ್ಚುವರಿ ನೀರು ಲಭ್ಯವಿದ್ದು, ಮೇ ತಿಂಗಳ ಅಂತ್ಯದವರೆಗೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು
ಕಬಿನಿ ಜಲಾಶಯದಲ್ಲಿ 14.2 ಟಿಎಂಸಿ ನೀರು ಲಭ್ಯವಿದೆ. ಕಾವೇರಿ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಿದೆ. ವ್ಯವಸಾಯ ಮತ್ತು ಕುಡಿಯುವ ನೀರಿಗೆ ಪೂರೈಕೆ ಮಾಡಿಯೂ ಮೇ ಅಂತ್ಯದ ವೇಳೆಗೆ 9 ಟಿಎಂಸಿ ಹೆಚ್ಚುವರಿ ನೀರು ಉಳಿಯಲಿದೆ ಎಂದು ೆ ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕರ ಇಂಜಿನಿಯರ್ ರಂಜಿತ್ ಕುಮಾರ್ ಮಾತನಾಡಿ, ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ಜೂ. 30ರ ತನಕ ಕುಡಿಯುವ ನೀರು ಸಮಸ್ಯೆ ಇಲ್ಲ. ಸಮಸ್ಯೆಯಾಗಬಹುದಾದ 94 ಗ್ರಾಮಗಳಲ್ಲಿಯೂ ನೀರಿನ ಲಭ್ಯತೆ ಇದೆ. ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸಲು 14.31 ಕೋಟಿ ರೂ. ಬೇಕಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.
ನಿಯಮ ಪಾಲಿಸಲು ಡಿಸಿ ಸೂಚನೆ:
ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಶಾಸಕರ ಸಮಿತಿಯಲ್ಲಿ ತೀರ್ಮಾನವಾದ ಕಡೆ ನೀರು ಪೂರೈಕೆ ಮಾಡುವ ಜತೆಗೆ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಇಲ್ಲದಿದ್ದರೆ ಬಿಲ್ ಪಾವತಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೂಚಿಸಿದರು.
ಈ ಬಾರಿ ಮಳೆ ಕೊರತೆ:
ಹಿಂದಿನ ವರ್ಷ ವಾಡಿಕೆಗಿಂತ ಶೇ.15 ಹೆಚ್ಚುವರಿ ಮಳೆಯಾಗಿತ್ತು. ಆದರೆ ಈ ವರ್ಷ ಜನವರಿಂದ ಫೆಬ್ರವರಿ ಅಂತ್ಯದವರೆಗೆ ಶೇ.96 ಮಳೆ ಕೊರತೆ ಇದೆ. ವಾಡಿಕೆ ಪ್ರಕಾರ 7.2 ಮಿಲಿ ಮೀಟರ್ ಮಳೆಯಾಗಬೇಕಿತ್ತು. 0.3 ಮಿಲಿ ಮೀಟರ್ ಮಳೆಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಇತರರು ಇದ್ದರು.