

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಶುಕ್ರವಾರ ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಸಿಂಧನೂರ, ಮಾನ್ವಿ ತಾಲೂಕುಗಳಲ್ಲಿ ಸಂಚರಿಸಿ ಇಚೇಗೆ ಸುರಿದ ಮಳೆಯಿಂದ ಬೆಳೆ ಹಾನಿ ಪರಿಶೀಲಿಸಿದರು.
ಮೊದಲಿಗೆ ಲಿಂಗಸುಗೂರು ತಾಲೂಕಿನ ಗುರಗುಂಟಾ ಗ್ರಾಮದ ಮೂಲಕ ಬೆಳೆಹಾನಿಯ ಪರಿವೀಕ್ಷಣೆ ಆರಂಭಿಸಿದರು. ಯರಡೋಣದಲ್ಲಿ ಹಾಳಾದ ತೊಗರಿ ಬೇಳೆ ವೀಕ್ಷಣೆ ಬಳಿಕ ಮಸ್ಕಿ ತಾಲೂಕಿನ ಕೋಠ ಗ್ರಾಮದಲ್ಲಿನ ಹತ್ತಿ ಬೆಳೆ, ಸಂತೆಕೆಲ್ಲೂರ ಗ್ರಾಮದಲ್ಲಿ ಹಾಳಾದ ತೊಗರಿ ಬೆಳೆಯ ಮಾಹಿತಿ ಪಡೆದುಕೊಂಡರು. ಬಳಿಕ ಸಿಂಧನೂರ ತಾಲೂಕು ಸರಹದ್ದಿನ ಸಂತೆಕೆಲ್ಲೂರ ಮತ್ತು ರಾಮತ್ನಾಳ ಗ್ರಾಮದಲ್ಲಿ ಹಾಳಾದ ಹತ್ತಿ ಫಸಲಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಮಾನ್ವಿ ತಾಲೂಕಿನ ಹಿರೇಕೋಟ್ನೇಕಲ್ ಗ್ರಾಮದ ರೈತ ಮುದುಕಪ್ಪಗೌಡ ವಟಗಲ್ ಅವರ ಜಮೀನಲ್ಲಿನ ಹತ್ತಿ ಬೆಳೆಯನ್ನುವೀಕ್ಷಣೆ ನಡೆಸಿ ಮಾಹಿತಿ ಪಡೆದುಕೊಂಡರು. ನೀರಮಾನ್ವಿಯ ರೈತ ಮಹೇಶ ನಾಗಸಾಯಿ ಅವರ ಜಮೀನಿಗೆ ತೆರಳಿ ಹಾಳಾದ ಹತ್ತಿ ಬೆಳೆಯ ವೀಕ್ಷಣೆ ನಡೆಸಿದರು. ಜಿಲ್ಲಾದ್ಯಂತ ಈಗಾಗಲೇ ಬೆಳೆಹಾನಿ ಕುರಿತ ಸಮೀಕ್ಷೆ ಆರಂಭವಾಗಿದೆ. ಅಧಿಕಾರಿಗಳಿಗೆ ಅಚ್ಚುಕಟ್ಟಾಗಿ ಸಮೀಕ್ಷೆ ನಡೆಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ತುರ್ವಿಹಾಳ,ಹಂಪಯ್ಯ ನಾಯಕ್,ಎಂಎಲ್ಸಿ ಎ ವಸಂತಕುಮಾರ, ಡಿಸಿ ನಿತೀಶ್ ಕೆ., ಎಸ್ಪಿ ಪುಟ್ಟಮಾದಯ್ಯ ಎಂ., ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧಿಕಾರೇತರ ಸದಸ್ಯ ಡಾ. ರಝಾಕ್ ಉಸ್ತಾದ್,ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೇರಿ ಅನೇಕರು ಇದ್ದರು.