Aನಾರಾಯಣಗೌಡ ಜಿಲ್ಲಾ ಉಸ್ತುವಾರಿ ಸಚಿವ!

K.C. Narayanagowda
Published on

ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಬಿಜೆಪಿಯಿಂದ ಗೆದ್ದ ಮೊದಲ ಶಾಸಕ ಎನಿಸಿಕೊಂಡ ಕೆ.ಆರ್.ಪೇಟೆಯ ಕೆ.ಸಿ.ನಾರಾಯಣಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗುವ ಮೂಲಕ ಮೂರು ದಶಕಗಳ ಬಳಿಕ ಕೆ.ಆರ್.ಪೇಟೆಗೆ ಸಚಿವ ಪಟ್ಟ ಸಿಕ್ಕಂತಾಗಿದೆ.

ಐತಿಹಾಸಿಕ ಗೆಲುವು ಸಾಧಿಸಿದ್ದ ನಾರಾಯಣಗೌಡ ಕ್ಷೇತ್ರದಿಂದ ಸತತವಾಗಿ 3ನೇ ಬಾರಿ ಗೆದ್ದ ಕೀರ್ತಿಗೂ ಭಾಜನರಾಗಿದ್ದರು. ಸಚಿವರಾಗಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿಕೊಂಡು ಪ್ರಚಾರ ನಡೆಸಿದ್ದ ಅವರೀಗ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ಜತೆಗೆ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಿಂದ ಸಚಿವರಾದ ಎರಡನೆಯವರು ನಾರಾಯಣಗೌಡ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪಕ್ಷೇತರವಾಗಿ ಗೆಲುವು ಸಾಧಿಸಿದ್ದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಆದರೆ, ಅವರಿಗೆ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಕೆಲ ದಿನಗಳ ನಂತರ ಬಿಜೆಪಿಯಿಂದ ದೂರ ಉಳಿದು ಸಚಿವ ಸ್ಥಾನ ಕಳೆದುಕೊಂಡಿದ್ದರು.

ಕೆ.ಸಿ.ನಾರಾಯಣಗೌಡ ಕಮಲದ ಚಿಹ್ನೆಯಿಂದಲೇ ಗೆಲುವು ಸಾಧಿಸಿದ್ದು, ಉಳಿದ ಅವಧಿ ಪೂರ್ತಿ ಸಚಿವರಾಗಿ ಇರುವುದು ಖಚಿತವಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ ಮೊದಲ ಶಾಸಕ, ಬಿಜೆಪಿಯ ಅಧಿಕೃತ ಮೊದಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಕೃಷ್ಣ ಮೊದಲ ಸಚಿವರು: 1985ರಲ್ಲಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಜನತಾ ಪಕ್ಷದ 6 ಶಾಸಕರು ಆಯ್ಕೆಯಾಗಿದ್ದರು. ಮಂಡ್ಯದಿಂದ ಎಸ್.ಡಿ.ಜಯರಾಮ್, ಕೆ.ಆರ್.ಪೇಟೆ -ಕೃಷ್ಣ, ನಾಗಮಂಗಲ-ಎಚ್.ಟಿ.ಕೃಷ್ಣಪ್ಪ, ಶ್ರೀರಂಗಪಟ್ಟಣ-ಬಂಡಿಸಿದ್ದೇಗೌಡ, ಮಳವಳ್ಳಿ-ಬಿ.ಸೋಮಶೇಖರ್, ಮದ್ದೂರು-ಅಪ್ಪಾಜಿಗೌಡ, ಕಾಂಗ್ರೆಸ್‌ನಿಂದ ಕಿರುಗಾವಲು-ಜಿ.ಮಾದೇಗೌಡ, ಕೆರಗೋಡು-ಎಚ್.ಡಿ.ಚೌಡಯ್ಯ, ಪಾಂಡವಪುರದಿಂದ ಕೆಂಪೇಗೌಡ ಪಕ್ಷೇತರವಾಗಿ ಆಯ್ಕೆಯಾಗಿದ್ದರು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. 1987ರ ವೇಳೆಗೆ ಜನತಾ ದಳದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಲು ತಂತ್ರಗಾರಿಕೆ ನಡೆಸಿ, ಜಿಲ್ಲೆಯ ಶಾಸಕರ ಬೆಂಬಲದ ನಿರೀಕ್ಷೆಯಲ್ಲಿದ್ದರು. ಆದರೆ, ಕೆ.ವಿ. ಶಂಕರಗೌಡರ ಸಲಹೆ ಮೇರೆಗೆ ಕೃಷ್ಣ, ಎಚ್.ಟಿ.ಕೃಷ್ಣಪ್ಪ, ಬಿ.ಸೋಮಶೇಖರ್, ಕೆ.ಕೆಂಪೇಗೌಡ, ಎಸ್.ಆರ್.ಬೊಮ್ಮಾಯಿಗೆ ಬೆಂಬಲ ವ್ಯಕ್ತಪಡಿಸಿದರೆ, ಬಂಡಿಸಿದ್ದೇಗೌಡ, ಅಪ್ಪಾಜಿಗೌಡ, ಎಸ್.ಡಿ.ಜಯರಾಂ ಎಚ್.ಡಿ.ದೇವೇಗೌಡರನ್ನು ಬೆಂಬಲಿಸಿದ್ದರು.

ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿ ತಮ್ಮ ಬೆಂಬಲಕ್ಕೆ ನಿಂತ ಎಚ್.ಟಿ.ಕೃಷ್ಣಪ್ಪರಿಗೆ ಅಬಕಾರಿ, ಕೃಷ್ಣರಿಗೆ ಪಶುಸಂಗೋಪನೆ ಮತ್ತು ರೇಷ್ಮೆ , ಬಿ.ಸೋಮಶೇಖರ್ ಅವರಿಗೆ ತೋಟಗಾರಿಕೆ ಸಚಿವ ಸ್ಥಾನ ಕೊಟ್ಟಿದ್ದರು.

ಲಿಂಗಾಯತರಿಂದಲೇ ಸಚಿವ ಸ್ಥಾನ: ಕೆ.ಆರ್.ಪೇಟೆಗೆ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದು ಬಂದದ್ದು ಲಿಂಗಾಯತರಿಂದಲೇ. ಎಸ್.ಆರ್.ಬೊಮ್ಮಾಯಿ ಆಗ ಅವಕಾಶ ಕಲ್ಪಿಸಿದ್ದರು. ಈಗ ನಾರಾಯಣಗೌಡ ಸಚಿವರಾಗಿದ್ದು, ಅವರಿಗೆ ಬಿ.ಎಸ್.ಯಡಿಯೂರಪ್ಪ (ಲಿಂಗಾಯತರು) ಅವಕಾಶ ಕಲ್ಪಿಸಿದ್ದಾರೆ.

6ನೇ ಸ್ಥಳೀಯ ಜಿಲ್ಲಾ ಉಸ್ತುವಾರಿ: ಕೆ.ಸಿ.ನಾರಾಯಣಗೌಡ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಖಚಿತವಾಗಿದ್ದು, 1994ರ ಬಳಿಕ ಸ್ಥಳೀಯರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿರುವ 6ನೇಯವರು.
1994ರಲ್ಲಿ ಎಸ್.ಡಿ.ಜಯರಾಂ ಅವರ ನಿಧನದ ನಂತರ ಕೆ.ಎನ್.ನಾಗೇಗೌಡ ಉಸ್ತುವಾರಿ ಸಚಿವರಾಗಿದ್ದರು. 1999ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದು, ಆಗ ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ನೀಡಿರಲಿಲ್ಲ. ಕೋಟೆ ಶಿವಣ್ಣ, ಟಿ.ಬಿ.ಜಯಚಂದ್ರ ಆಗ ಉಸ್ತುವಾರಿ ಸಚಿವರಾಗಿದ್ದರು.

2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾದರು. ನಂತರ ಜೆಡಿಎಸ್-ಬಿಜೆಪಿ ಸರ್ಕಾರದಲ್ಲೂ ಅವರೇ ಜಿಲ್ಲಾ ಉಸ್ತುವಾರಿಯಾಗಿದ್ದರು.
2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರಸ್ವಾಮಿ ಸಚಿವರಾದರು. ಮೊದಲಿಗೆ ರಾಮಚಂದ್ರೇಗೌಡ, ನಂತರ ಯೋಗೇಶ್ವರ್ ಕೊನೆಯಲ್ಲಿ ಆರ್.ಅಶೋಕ್ ಉಸ್ತುವಾರಿ ಸಚಿವರಾಗಿದ್ದರು. 2018ರ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಿ.ಎಸ್.ಪುಟ್ಟರಾಜು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜತೆಗೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವರಾಗಿದ್ದರು.

2019ರ ಬಿಜೆಪಿ ಸರ್ಕಾರ ಬಂದ ನಂತರ ಆರ್.ಅಶೋಕ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈಗ ಆ ಸ್ಥಾನಕ್ಕೆ ನಾರಾಯಣಗೌಡ ಬರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net