ಹಿರಿಯ ನಾಗರಿಕರ ಬೇಡಿಕೆ ಈಡೇರಿಸದಿದ್ದರೆ ಸಚಿವೆ ಹೆಬ್ಬಾಳಕರ ನಿವಾಸಕ್ಕೆ ಮುತ್ತಿಗೆ

NEW Hiriya Nagarikara PM NEW
Published on

ಹುಬ್ಬಳ್ಳಿ : ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಹಿರಿಯ ನಾಗರಿಕರ ವೃದ್ಧಾಪ್ಯವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿರುವ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವ ಹಿರಿಯ ನಾಗರಿಕರ ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್​ನಲ್ಲಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ, ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಬೇಕು. ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ರಚಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಮಹಾರಾಷ್ಟ್ರ ಸರ್ಕಾರ 65 ವರ್ಷ ದಾಟಿದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ 7 ಸಾವಿರ ರೂ. ಪಿಂಚಣಿ ನೀಡುತ್ತಿದ್ದು, ವಾರ್ಷಿಕ 15 ಸಾವಿರ ರೂ. ಪ್ರವಾಸ ಭತ್ಯೆ, ಸರ್ಕಾರಿ ಬಸ್ ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.50 ರಷ್ಟು ರಿಯಾಯತಿ, ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ವಿಮೆ, ಉಚಿತ ಚಿಕಿತ್ಸೆ, ವಸತಿ ರಹಿತ ನಾಗರಿಕರಿಗೆ ವಸತಿ ಸೌಲಭ್ಯ, ಆಹಾರ ನೀಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದೇವು. ಅವರು ಬೇಡಿಕೆಗಳ ಈಡೇರಿಕೆಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಕಚೇರಿಗೆ ಕಡತ ಕಳಿಸಿದ್ದರು. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕಡತಗಳನ್ನು ಕಣ್ಣೆತ್ತಿಯೂ ನೋಡಿಲ್ಲ ಎಂದು ದೂರಿದರು.

ಡಿ.ಟಿ. ಪಾಟೀಲ, ಸುನಂದಾ ಬೆನ್ನೂರ, ಎ.ಸಿ. ಕೊಳೂರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net