

ಮಂಡ್ಯ: ರಾಜ್ಯದಲ್ಲಿ ಜನಸಾಮಾನ್ಯರ ವಿರೋಧಿ ಸರ್ಕಾರವಿದೆ. ತಮ್ಮ ಗ್ಯಾರಂಟಿ ಯೋಜನೆಗಳಿಗಾಗಿ ಬಡವರ ಕಿಸೆಗೆ ಕೈಹಾಕಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಹಲವು ದರವನ್ನು ಏರಿಕೆ ಮಾಡಿದ್ದಾಗಿತ್ತು. ಇನ್ನು ಯಾವ ಯಾವ ಇಲಾಖೆಯಲ್ಲಿ ಎಷ್ಟು ದೋಚಿದ್ದಾರೋ?. ಎಷ್ಟು ದಿನ ಈ ಆಟ ಆಡುತ್ತಾರೋ, ಇನ್ನು ಹದಿನೈದು ದಿನ ಆದ ಮೇಲೆ ಏನು ಆಗಲಿದೆಯೋ ಗೊತ್ತಿಲ್ಲ. ಐದು ಗ್ಯಾರಂಟಿಗಾಗಿ ಕೆಲ ದರವನ್ನು ಹೆಚ್ಚಳ ಮಾಡಿದ್ದಾರೆ. ಇದರ ಪರಿಣಾಮ ಜನಸಾಮಾನ್ಯರಿಗೆ ಆಗಲಿದೆ. ಹಿಂದೆ ಕೇಂದ್ರದ ಬಗ್ಗೆ ಮಾತನಾಡಿದ್ದರು. ಮುಂದೆ ಜನರೇ ತೀರ್ಮಾನ ಮಾಡುತ್ತಾರೆ. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡುವುದನ್ನು ತಡೆಯದೇ ರಾಜ್ಯ ಸರ್ಕಾರ ಕುಳಿತಿದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಣಯದ ಮೇರೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಾಗಿದೆ. ಅವರು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ನನಗೆ ಎರಡು ಖಾತೆ ಕೊಟ್ಟಿದ್ದು, ದೊಡ್ಡ ಸವಾಲು ಇದೆ. ಅಷ್ಟು ಸುಲಭವೂ ಅಲ್ಲ, ಇದು ಕಠಿಣ ಹಾದಿ. ಎರಡು ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಮಾಡಿದ್ದೇನೆ. ಇನ್ನು ಪ್ರಥಮ ಸಹಿ ರಾಜ್ಯದ ಕಡತಕ್ಕೆ ಮಾಡಿದ್ದೇನೆ ಎಂದರು.
ಕುದುರೆಮುಖ ಭಾಗದ ಯೋಜನೆಗೆ ಸಹಿ ಹಾಕಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಹಿಂದೆ ನಾನು ಸಿಎಂ ಆದಾಗ ವಿರೋಧ ಮಾಡಿದ್ದೇ ಎಂದು ಹೇಳಿದ್ದಾರೆ. ಇಲ್ಲಿ ಯಾರೂ ಅಪಾರ್ಥ ಮಾಡಿಕೊಳ್ಳುವುದು ಬೇಡ. ಅಲ್ಲಿ ಒಂದು ವರ್ಷ ಟ್ರಯಲ್ ನಡೆಯುತ್ತದೆ. ಅದಿರು ಸಿಗುತ್ತಾ ಎಂದು ನೋಡುತ್ತಾರೆ. ಅಧಿಕಾರಿಗಳ ಜತೆ ಕೂಡ ಚರ್ಚೆ ಮಾಡಿದ್ದೇನೆ. ಐವತ್ತು ವರ್ಷಗಳ ಕಾಲ ಅದಿರು ಉತ್ಪಾದನೆ ನಡೆಯುತ್ತದೆ. ಮರಗಳನ್ನು ಬೆಳೆಸಲು, ಅರಣ್ಯ ಕಾಯಲು ಕಂಪನಿ ಸರ್ಕಾರಕ್ಕೆ 123 ಕೋಟಿ ರೂ. ಕೊಟ್ಟಿದೆ. ಹಸಿರೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಕಂಪನಿ ಹಣ ಕೂಡ ಕಟ್ಟಿದ್ದಾರೆ. ಕಡತವನ್ನು ಸಂಪೂರ್ಣ ಸ್ಟಡಿ ಮಾಡಿದ್ದೇನೆ. ಎರಡು ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇಟ್ಟಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಜಿ.ಟಿ.ದೇವೇಗೌಡ, ಎಂಎಲ್‌ಸಿ ವಿವೇಕಾನಂದ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ಇತರರಿದ್ದರು.
ಇದಕ್ಕೂ ಮುನ್ನ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು. ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿ ಜಯೋಷ ಮೊಳಗಿಸಲಾಯಿತು.