

ಮೈಸೂರು: ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ದಾಂಪತ್ಯ ಜೀವನದ ನೋವು-ನಲಿವುಗಳನ್ನು ಕಾವ್ಯವಾಗಿ ಪರಿವರ್ತಿಸಿದರೆ, ದ.ರಾ.ಬೇಂದ್ರೆ ಅವರು ತಮ್ಮ ಬದುಕಿನ ನೋವು-ನಲಿವುಗಳನ್ನೇ ಕಾವ್ಯವಾಗಿ ಪರಿವರ್ತಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ನೇಹ ಸಿಂಚನ ಟ್ರಸ್ಟ್ ಸಹಯೋಗದೊಂದಿಗೆ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಎಸ್.ನರಸಿಂಹಸ್ವಾಮಿ ಹಾಗೂ ದ.ರಾ.ಬೇಂದ್ರ ನೆನಪಿನೋತ್ಸವ ದಾಂಪತ್ಯ ಕವಿಗೋಷ್ಠಿ ಹಾಗೂ ಬೇಂದ್ರೆ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿಗಳು ತಾವು ಕಂಡುಂಡ ನೋವು, ನಲಿವುಗಳನ್ನೇ ಕಾವ್ಯವಾಗಿಸಿ ಜೀವನ ಉತ್ಸಾಹದಿಂದ ಬದುಕುತ್ತಿದ್ದರು. ಎಷ್ಟೇ ಕಷ್ಟ ಇದ್ದರೂ ಅದನ್ನು ಸಂತೋಷದಿಂದಲೇ ಆಸ್ವಾದಿಸುವ ಕಲೆ ಕರಗತವಾಗಿತ್ತು. ಕೆಎಸ್‌ಎನ್ ಹಾಗೂ ದ.ರಾ.ಬೇಂದ್ರೆ ಅವರು ಅಂತದ್ದೇ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಚಿವರಿಗೆ ಸರ್ಕಾರ ಶಾಲೆಗಳಲ್ಲಿ ಇರುವ ಮೂಲಸೌಕರ್ಯ, ವಸ್ತುಸ್ಥಿತಿ ಬಗ್ಗೆ ಮಾಹಿತಿಯೇ ಇರುವುದಿಲ್ಲ. ನಾನು ಸಚಿವನಾಗಿದ್ದಾಗ ಬಿಸಿಯೂಟ ಯೋಜನೆ, 30 ಸಾವಿರ ಶಾಲೆಗಳಿಗೆ ಕಾಂಪೌಂಡ್, ಶೌಚಗೃಹ ಸೇರಿದಂತೆ ಮೂಲಸೌಕರ್ಯ ಒದಗಿಸಿದ್ದೆ ಎಂದು ವಿವರಿಸಿದರು.
ನನ್ನ ಸಹಪಾಠಿಯೊಬ್ಬರು ಕೇಂದ್ರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಅವರಲ್ಲಿ ಮೂಲಸೌಲಭ್ಯ ಕೊರತೆ ಕುರಿತು ಪ್ರಸ್ತಾಪಿಸಿದಾಗ ಅದಕ್ಕೆ ಅವರು ಸ್ಪಂದಿಸಿ, ಸುಮಾರು 250 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದರು ಎಂದು ನೆನಪಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ನಗರದ ಕ್ಯಾತನಮಾರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶೌಚಗೃಹ ನಿರ್ಮಾಣಕ್ಕೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ಹಸುಗಳನ್ನು ಕಟ್ಟಿ ಪ್ರತಿಭಟಿಸಿದ್ದರು. ಆಗ ಶಿಕ್ಷಣ ಸಚಿವರಾಗಿದ್ದ ವಿಶ್ವನಾಥ್ ಅವರು ಅದೇ ಶಾಲೆಯಲ್ಲಿ ಒಂದು ರಾತ್ರಿ ವಾಸ್ತವ್ಯ ಮಾಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಹಸುಗಳನ್ನು ಶಾಲಾ ಆವರಣದಲ್ಲಿ ಕಟ್ಟದಂತೆ ತಾಕೀತು ಮಾಡಿದರು. ನಂತರ ಆ ಶಾಲೆಗೆ ಎರಡು ಶೌಚಗೃಹ ನಿರ್ಮಿಸಿಕೊಟ್ಟು ಸಹಕರಿಸಿದ್ದರು ಎಂದು ನೆನೆದರು.
ಕೆಎಸ್‌ನ ನೆನಪಿನ ದಾಂಪತ್ಯ ಕವಿಗೋಷ್ಠಿಯಲ್ಲಿ ಕವಿಯತ್ರಿ ಪದ್ಮಿನಿ ಹೆಗಡೆ, ಗಜಾನನ ಈಶ್ವರ ಹೆಗಡೆ ದಂಪತಿ, ಪದ್ಮಾ ಆನಂದ್, ಎಂ.ಆರ್.ಆನಂದ್, ಡಾ.ಟಿ.ಎನ್.ನಂದ, ಜಿ.ಆರ್.ಶ್ರೀವತ್ಸ, ಸುಗಂಧಮ್ಮ, ಜಯಪ್ಪ ಹೊನ್ನಾಳಿ, ಸುಧಾ ರಮೇಶ್, ರಮೇಶ್, ಸವಿತಾ, ಭೇರ್ಯ ರಾಂಕುಮಾರ್, ಡಾ.ಡಿ.ಕೆ.ಉಷಾ, ಸತೀಶ್ ಜವರೇಗೌಡ, ಮಂಜುಳಾ, ಸಿಂಹ, ಎನ್.ಆರ್.ರೂಪಶ್ರೀ, ರಾಮಚಂದ್ರ ಭಟ್, ವಿಜಯ್ ಮಂಜುನಾಥ್, ಮಂಜುನಾಥ್ ಕವಿತೆಗಳನ್ನು ವಾಚಿಸಿದರು.
ಬಳಿಕ ದ.ರಾ.ಬೇಂದ್ರೆ ನೆನಪಿನ ಗೀತಾ ಗಾಯನದಲ್ಲಿ ಕುವೆಂಪುನಗರ ಮಹಾರತ್ನ ಟ್ರಸ್ಟ್, ಮಹಿಳಾ ಸಮಾಜ, ವಿಜಯನಗರದ ನಾದಾಮೃತ ಟ್ರಸ್ಟ್, ರಾಮಕೃಷ್ಣನಗರ ಅಚ್ಯುತ ಭಜನಾ ಮಂಡಳಿ, ಸ್ವರಾಂಜಲಿ ಸಂಗೀತ ಕೇಂದ್ರ, ರಾಗಾಲಯ ಸಂಗೀತ ಕೇಂದ್ರದ ಗಾಯಕರು ಬೇಂದ್ರೆ ರಚಿತ ಗೀತೆಗಳನ್ನು ಹಾಡಿದರು.
ಕವಿಯತ್ರಿ ಡಾ.ಕೆ.ಎನ್.ಲಾವಣ್ಯ ಪ್ರಭಾ, ವಿಪ್ರ ಮುಖಂಡ ಕೆ.ರಘುರಾಂ ವಾಜಪೇಯಿ, ಮಹಿಳಾ ಬರಹಗಾರ್ತಿ ಕೆ.ಲೀಲಾ ಪ್ರಕಾಶ್, ಲೇಖಕಿ ಕೆ.ಟಿ.ಶ್ರೀಮತಿ, ಗೌರವ ಕಾರ್ಯದರ್ಶಿ ಮ.ನ.ಲತಾ ಮೋಹನ್, ಆಯೋಜಕರಾದ ಪದ್ಮಾ ಪಾಂಡುರಂಗ, ವಿಜಯಕುಮಾರ್ ಅವರೇಕಾಡು, ಅಮೀನಾ, ಕಾಲೇಖಾನ್ ಇತರರು ಇದ್ದರು.