ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ ಕೆ.ಗೋಪಾಲಯ್ಯ: ಕಟ್ಟೇರಿ ಗ್ರಾಮದ ವಸತಿ ಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

WhatsApp Image 2022-12-15 at 4.35.24 PM
Published on

ಮಂಡ್ಯ: ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ವಸತಿ ಶಾಲೆಯ ಮುಖ್ಯಶಿಕ್ಷಕ ಹಾಗೂ ವಾರ್ಡನ್ ಚಿನ್ಮಯಸ್ವಾಮಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಹೊರಬಂದ ಬೆನ್ನಲ್ಲೇ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಸ್ಟೆಲ್‌ಗೆ ಭೇಟಿ ನೀಡಿದರು.

ನಗರದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯ ಬಳಿಕ ಅಧಿಕಾರಿಗಳೊಂದಿಗೆ ತೆರಳಿದ ಅವರು, ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಮುಖ್ಯಶಿಕ್ಷಕನ ವರ್ತನೆ ಬಗ್ಗೆ ಸಚಿವರಿಗೆ ವಿವರಣೆ ನೀಡಿದ ವಿದ್ಯಾರ್ಥಿನಿಯರು, ಆತ ತಮ್ಮೊಂದಿಗೆ ನಡೆದುಕೊಳ್ಳುತ್ತಿದ್ದನ್ನು ಹೇಳಿದರು. ಈ ವೇಳೆ ಧೈರ್ಯ ತುಂಬಿದ ಸಚಿವರು, ಯಾರಿಗೂ ಹೆದರಬೇಡಿ. ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನೂ ಪೊಲೀಸರಿಗೆ ಕೊಡಿ. ನಿಮ್ಮೆಲ್ಲರ ಧೈರ್ಯ ಮೆಚ್ಚುವಂತದ್ದು. ಕಿತ್ತೂರು ರಾಣಿ ಚನ್ನಮ್ಮ ಅವರಂತೆ ಸಾಹಸ ಮಾಡಿದ್ದೀರಿ ಎಂದರು.

ಈ ವೇಳೆ ಸ್ಥಳದಲ್ಲಿದ ಸಾರ್ವಜನಿಕರು, ಸಚಿವರಿಗೆ ಹಾಸ್ಟೆಲ್ ಅಧ್ವಾನದ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲದೆ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ಗಳಿಗೆ ಮಹಿಳೆಯರನ್ನೇ ವಾರ್ಡನ್ ಆಗಿ ನೇಮಿಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಮಂಡ್ಯ ವಿಶ್ವವಿದ್ಯಾಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಾಮನಿರ್ದೇಶಕ ಡಾ.ಇಂದ್ರೇಶ್, ಡಿಡಿಪಿಐ ಜವರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net