ಸಚಿವ ಸಂಪುಟದಿಂದ ಜಮೀರ್‌ಗೆ ವಜಾ ಮಾಡಲಿ

Kadadi
Published on

ಬೆಳಗಾವಿ: ವಕ್ಫ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಿರುವ, ಕೇಂದ್ರ ಸಚಿವರ ವರ್ಣದ ಬಗ್ಗೆ ಮಾತನಾಡುತ್ತಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ, ಸರ್ಕಾರಿ ಶಾಲೆ, ಕಚೇರಿಗಳ ಆಸ್ತಿ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ಕಾನೂನು ಬಾಹಿರವಾಗಿ ಉಲ್ಲೇಖಿಸಿದ್ದಾರೆ. ಸಚಿವ ಜಮೀರ್ ಅಹ್ಮದ್‌ಖಾನ್ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಗಳಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ ಎಂದು ದೂರಿದರು.

ಸಮರ್ಥನೆ ಸರಿಯಲ್ಲ: ಕೇಂದ್ರ ಕಲ್ಲಿದ್ದಲು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವರ್ಣದ ಬಗ್ಗೆ ಸಚಿವ ಜಮೀರ್ ಮಾತನಾಡಿರುವುದು ಖಂಡನೀಯ. ಅಪ್ರಬುದ್ಧರನ್ನು ಸಚಿವರನ್ನಾಗಿ ಮಾಡಿದ್ದು ದೊಡ್ಡ ದುರಂತ. ಯಾರು ಜನ್ಮ ತಾಳಿದ ಕೊಡಲೇ ಬಣ್ಣ ಹಚ್ಚಿಕೊಂಡು ಬಂದಿರುವುದಿಲ್ಲ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಚರ್ಮದ ಬಣ್ಣದ ಬಗ್ಗೆ ಮಾತನಾಡುವ ಸಚಿವ ಜಮೀರ್ ವಿರುದ್ಧ ಕ್ರಮ ಜರುಗಿಸುವ ಬದಲು ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ, ಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ಸ್ವಪಕ್ಷೀಯ ನಾಯಕರಿಗೆ ಎಚ್ಚರಿಕೆ

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ಬಡಾವಣೆ ಪಡೆದುಕೊಂಡಿರುವ ಪ್ರಕರಣ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕಕ್ಕೆ ಒಳಗಾಗಿದ್ದಾರೆ. ಸಿದ್ದರಾಮಯ್ಯ ಹೋರಾಟದ ಮೂಲಕ ಬೆಳೆದು ಬಂದ ವ್ಯಕ್ತಿತ್ವ. ಆದರೆ, ಕಾಂಗ್ರೆಸ್ ಪಕ್ಷದಲ್ಲಿಯೇ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ನನ್ನನ್ನು ಮುಟ್ಟಿದಿರೆ ಸರಿ ಇರೋದಿಲ್ಲ ಎಂದು ಸ್ವಪಕ್ಷೀಯ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net