ಲೋಕೋಪಯೋಗಿ ಸಚಿವರೇ ಪತ್ತೆ ಹಚ್ಚಿದ್ರು ಕಳಪೆ ಹೆದ್ದಾರಿ ಕಾಮಗಾರಿ; ನ್ಯೂನತೆ ಸರಿಪಡಿಸಲು ಸೂಚಿಸಿ, ಎಚ್ಚರಿಕೆ..

C C Patil
Published on

ಹಾಸನ: ಹಾಸನ-ಸಕಲೇಶಪುರ-ಶಿರಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ದುರಸ್ತಿ ಕಾಮಗಾರಿ ಕೆಲವು ಕಡೆ ಕಳಪೆಯಾಗಿರುವುದನ್ನು ಖುದ್ದು ಲೋಕೋಪಯೋಗಿ ಸಚಿವರೇ ಪತ್ತೆ ಹಚ್ಚಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.

ನೆಲಮಂಗಲ ಕ್ರಾಸ್​ನಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಮಳೆ ಅನಾಹುತದಿಂದ ಉಂಟಾಗಿರುವ ಹೆದ್ದಾರಿ ಹಾನಿಯನ್ನು ಇಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಪರಿಶೀಲಿಸಿದರು. ಬಳಿಕ ಮಾತನಾಡುತ್ತಿದ್ದ ಅವರು, ಹಾಸನ ಸಕಲೇಶಪುರ ಭಾಗದ ಹೆದ್ದಾರಿ ವಿಸ್ತರಣೆ ಕಾಮಗಾರಿಯು ನಾನಾ ಕಾರಣದಿಂದ ವಿಳಂಬವಾಗಿತ್ತು. ಅಷ್ಟೇ ಅಲ್ಲ ಬಾಳ್ಳುಪೇಟೆ ಮತ್ತಿತರ ಕಡೆಗಳಲ್ಲಿ ಹೆದ್ದಾರಿ ಕಾಮಗಾರಿ ಲೋಪದೋಷದಿಂದ ಕೂಡಿರುವುದು ಇಲ್ಲವೇ ಕಳಪೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಮರ್ಪಕವಾಗಿ ಸರಿಪಡಿಸಲು ಸ್ಥಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು- ಹಾಸನ- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕೆಲಸ ಸರಿಯಾಗಿ ನಡೆಯುವಂತಾಗಲು ಗುಣಮಟ್ಟ ನಿಯಂತ್ರಣಾಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net