ಸಾರಿಗೆ ಸಚಿವರ ಜಿಲ್ಲೆಯಲ್ಲಿ ನೌಕರರ ಮುಷ್ಕರ

11RAVIG3-A-WEb
ನಿಯಮಾನುಸಾರ ವೇತನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ, ಪ್ರತಿಭಟಿಸಿದರು.
Published on

ಬೆಳಗಾವಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೂ ಕೆಎಸ್‌ಆರ್‌ಟಿಸಿ ನೌಕರರು ಶುಕ್ರವಾರ ಕರ್ತವ್ಯ ಬಹಿಷ್ಕರಿಸಿ, ಮುಷ್ಕರ ನಡೆಸಿದರು.

ಇಲ್ಲಿನ ನಗರ ಸಾರಿಗೆ ಮತ್ತು ಕೇಂದ್ರ ಬಸ್ ನಿಲ್ದಾಣ ಹಾಗೂ ಜಿಲ್ಲೆಯ ಎಲ್ಲ ಡಿಪೋಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ, ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು. ಮುಷ್ಕರದಿಂದಾಗಿ ಸಿಟಿಬಸ್ ಮತ್ತು ಬೆಳಗಾವಿಯಿಂದ ಹೊರಗಡೆ ಹೋಗುವ ಅಂತರ್‌ಜಿಲ್ಲೆ ಹಾಗೂ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಚರಿಸುವ ಎಲ್ಲ ಮಾರ್ಗಗಳ ಬಸ್ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
12 ಗಂಟೆ ದುಡಿಮೆ, 8 ಗಂಟೆಯ ಸಂಬಳ: ಸಾರಿಗೆ ಸಂಸ್ಥೆಯ ನೌಕರರನ್ನು 12 ಗಂಟೆ ದುಡಿಸಿಕೊಂಡು ಕೇವಲ 8 ಗಂಟೆಗಳ ವೇತನ ನೀಡಲಾಗುತ್ತಿದೆ. ನಿಗಮದಲ್ಲಿ ನಿವೃತ್ತಿ ಹೊಂದಿದವರಿಗೆ 2,000 ರೂ. ಪಿಂಚಣಿ ನೀಡಲಾಗುತ್ತಿದೆ. ಕೆಪಿಟಿಸಿಎಲ್ ನೌಕರರಿಗೆ ಸರ್ಕಾರಿ ನಿಯಮಾನುಸಾರ ವೇತನ, ಪಿಂಚಣಿ ನೀಡಲಾಗುತ್ತಿದೆ. ಅದರಂತೆ, ಕೆಎಸ್‌ಆರ್‌ಟಿಸಿ ನೌಕರರಿಗೂ ಸರ್ಕಾರಿ ನಿಯಮಾನುಸಾರ ವೇತನ ನೀಡಬೇಕು ಎಂದು ಪ್ರತಿಭಟನಾನಿರತ ನೌಕರರು ಆಗ್ರಹಿಸಿದರು.

ಪ್ರಯಾಣಿಕರ ಪರದಾಟ

ಪ್ರಯಾಣಕ್ಕೆ ಸಾರಿಗೆ ಬಸ್ಸನ್ನೇ ಅವಲಂಬಿಸಿದ್ದ ಜನಸಾಮಾನ್ಯರು ಹಾಗೂ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿತು. ಪರೀಕ್ಷೆಗೆ ಹಾಜರಾಗಲು ಹೊರಟಿದ್ದ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು, ‘ಬೇಗ ಮುಷ್ಕರ ನಿಲ್ಲಿಸಿ. ಬಸ್‌ಸಂಚಾರ ಆರಂಭಿಸಿ’ ಎಂದು ಸಿಬ್ಬಂದಿಗೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಕಿಡಿಗೇಡಿಗಳಿಂದ ಕಲ್ಲು ತೂರಾಟ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ನಡುವೆಯೂ ಕೋಟೆ ಕೆರೆ ಬಳಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿ, ಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದರು. ಎಲ್ಲ ಸಹೋದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ. ಬೆಳಗಾವಿ-ಸಂಕೇಶ್ವರ ಮಾರ್ಗದ ಬಸ್ ನಗರದಲ್ಲಿ ಸಂಚರಿಸುತ್ತಿತ್ತು ಎಂಬ ಕಾರಣಕ್ಕೆ ಕಿಲ್ಲಾ ಕೆರೆ ಬಳಿಯ ಅಶೋಕ ವೃತ್ತದ ಸಮೀಪದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಅವಕಾಶ ಬಳಸಿಕೊಂಡ ಆಟೋ ಚಾಲಕರು

ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಪರದಾಡುತ್ತಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಮನಬಂದಂತೆ ಪ್ರಯಾಣಿಕರಿಂದ ಬಾಡಿಗೆ ವಸೂಲಿ ಮಾಡಿದರು. ಕೇಂದ್ರ ಬಸ್ ನಿಲ್ದಾಣದಿಂದ ತಿಳಕವಾಡಿ ಪ್ರದೇಶಕ್ಕೆ 400ರೂ., ಸಾಂಬ್ರಾಗೆ 500ರೂ., ರಾಮದೇವಗಲ್ಲಿಗೆ 150ರೂ. ಶಹಾಪುರಕ್ಕೆ 300ರೂ., ವಡಗಾವಿಗೆ 400 ರೂ. ಹೀಗೆ ದಿನದ ಬಾಡಿಗೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ನಿಗದಿಸಿಕೊಂಡು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ದೃಶ್ಯ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡುಬಂತು.

ಸಿಎಂ ೆಟೋ ಮನೆಯಲ್ಲಿಟ್ಟು ಪೂಜಿಸ್ತೇವೆ

ಕೆಪಿಟಿಸಿಎಲ್ ಸೇರಿದಂತೆ ಹಲವು ನಿಗಮಗಳ ಉದ್ಯೋಗಿಗಳನ್ನು ಸರ್ಕಾರಿ ನೌಕರರನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿದೆ. ನಮ್ಮನ್ನೂ ಸರ್ಕಾರಿ ಸೇವಕರು ಎಂದು ಪರಿಗಣಿಸಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಫೋಟೋ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಎಂದು ಸಾರಿಗೆ ನೌಕರರು ವಿಭಿನ್ನ ರೀತಿಯಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net