ರೈತರು, ಕಬ್ಬು ಬೆಳೆಗಾರರಿಗಿರುವ ಸಮಸ್ಯೆ ನೀಗಿಸಿ - ಡಾ. ಕೋರೆ ಒತ್ತಾಯ

0000
Published on

ಬೆಳಗಾವಿ: ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದು ಅವರಿಗೆ ತುರ್ತು ಸೌಲಭ್ಯ ನೀಡುವುದು ಅಗತ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ.

ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಚೇರಿಯಲ್ಲಿ ಸಕ್ಕರೆ ಹಾಗೂ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸೋಮವಾರ ಭೇಟಿಯಾಗಿ ಮಾತನಾಡಿದ ಅವರು, ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಕಬ್ಬು ಬೆಳೆಗಾರರು ಮತ್ತು ರೈತರು ತೀವ್ರ ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದರು.

ಬದುಕೂ ಸಿಹಿಯಾಗಲಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರು ಹಲವಾರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೂ ತೊಂದರೆಯಾಗದಂತೆ ಸರ್ಕಾರವು ಉಪ ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಸಲು ಸಾಧ್ಯ.

ರೈತರ ಬದುಕಿಗೆ ಸಕ್ಕರೆ ಸಿಹಿಯಾಗಬೇಕೇ ವಿನಹ ಕಹಿಯಾಗಬಾರದು. ಹಾಗಾಗಿ ಸಕ್ಕರೆ ಸಚಿವರು ವಿಶೇಷ ಆದ್ಯತೆ ನೀಡಿ ಕ್ರಮ ವಹಿಸಬೇಕು ಎಂದು ಸಚಿವರಿಗೆ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net