ಕ್ರೀಡೆಯಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿ

8 smg 9 (1)
Published on

ಶಿವಮೊಗ್ಗ: ಕ್ರೀಡೆಯು ದೈಹಿಕ ಸಾಮರ್ಥ್ಯ ಸಾಬೀತುಪಡಿಸುವ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ. ಸದಾ ಲವಲವಿಕೆಯಿಂದ ಇರಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ ಆಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಸೋಮವಾರ ಚಾಲನೆ ಮಾತನಾಡಿದರು.

ನೌಕರ ಆರೋಗ್ಯವಾಗಿದ್ದರೆ ಆತನ ಇಡೀ ಕುಟುಂಬವೇ ನೆಮ್ಮದಿಯಿಂದ ಇರುತ್ತದೆ. ನೆರೆ, ಕರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ನೌಕರರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಅದರ ಪರಿಣಾಮ ನೆರೆಯಲ್ಲಿ ಸಿಲುಕಿದಂತಹ ಅನೇಕ ಕುಟುಂಬಗಳನ್ನು ರಕ್ಷಣೆ ಹಾಗೂ ಕರೊನಾವನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಹಣವನ್ನು ಯಾರು ಎಷ್ಟು ಬೇಕಾದರೂ ಸಂಪಾದಿಸಬಹುದು. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಸದೃಢರಾಗಿದ್ದರೆ ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು. ಸರ್ಕಾರಿ ನೌಕರರು ಬಹುಪಾಲು ಸಮಯವನ್ನು ಕಚೇರಿ ಕೆಲಸಗಳಲ್ಲೇ ಕಳೆಯುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನೌಕರ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡಬೇಕೆಂದು ಸಲಹೆ ನೀಡಿದರು.

ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಲೋಕಸಭಾ ಬಿ.ವೈ.ರಾಘವೇಂದ್ರ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ವರ್ಷವಿಡೀ ಅಭಿವೃದ್ಧಿ ಕೆಲಸಗಳಲ್ಲಿ ಕೈ ಜೋಡಿಸುವ ನೌಕರರು ಕ್ರೀಡಾಕೂಟ ಅಥವಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದರಿಂದ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮತ್ತಷ್ಟು ಹೆಚ್ಚಿನ ಉತ್ತೇಜನ ಸಿಗಲಿದೆ ಎಂದರು.

ಕೆಲವರು ಮಾಡುವ ತಪ್ಪಿನಿಂದ ಇಡೀ ಸರ್ಕಾರಿ ನೌಕರರ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತದೆ. ಅದು ಸರಿಯಲ್ಲ. ಕರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಇಡೀ ನೌಕರ ವರ್ಗ ಸೇನಾನಿಗಳಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ ಕರೊನಾ ದೂರವಾಗಿದೆ. ಆದರೂ ಮೈ ಮರೆದೆ ಅಂತರ ಕಾಪಾಡಿಕೊಳ್ಳಬೇಕು. ಸುರಕ್ಷತಾ ಕ್ರಮ ಅನುಸರಿಸಬೇಕೆಂದು ಸಲಹೆ ನೀಡಿದರು.

ಡಿಸಿ ಕೆ.ಬಿ.ಶಿವಕುಮಾರ್ ಮಾತನಾಡಿ, ಬೇರೆ ಬೇರೆ ಇಲಾಖೆಗಳು ಒಂದೇ ವೇದಿಕೆಯಡಿ ಸೇರಿದ್ದು ಪರಸ್ಪರ ಪರಿಚಯಕ್ಕೆ ಕ್ರೀಡಾಕೂಟ ಸಹಕಾರಿ ಆಗಲಿದೆ. ಕ್ರೀಡಾಸ್ಪೂರ್ತಿ ಮೆರೆಯಬೇಕು ಎಂದರು. ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿದರು.

ಮೇಯರ್ ಸುವರ್ಣಾ ಶಂಕರ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಸಣ್ಣ ಕೈಗಾರಿಕೆ ಸಂಘದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net