ಕಾರ್ಖಾನೆ ಸ್ಥಾಪಿಸುವ ಉದ್ಯಮಿಗಳಿಗೆ ಶೇ.5 ರಿಯಾಯಿತಿ

05 jlr
Published on

ಜಗಳೂರು: ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳಲ್ಲಿ ಕಾರ್ಖಾನೆ ಸ್ಥಾಪಿಸುವ ಉದ್ಯಮಿಗಳಿಗೆ ಶೇ.5 ರಿಯಾಯಿತಿ ನೀಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಪಟ್ಟಣದ ಜನ ಸಂಪರ್ಕ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು. ಸಿದ್ದರಾಮಯ್ಯನವರು ಅದನ್ನು ಮುಂದುವರಿಸಿಕೊಂಡು ಇನ್ನೊಂದು ಸಮಿತಿಯನ್ನು ಮಾಡಿದ್ದಾರೆ. ಉದ್ಯೋಗ ಸೃಷ್ಟಿಯಾಗಬೇಕು, ನೀರಾವರಿ ಪ್ರದೇಶವಾಗಬೇಕು, ಸಮಗ್ರ ಅಭಿವೃದ್ಧಿಯಾಗಬೇಕು ಎನ್ನುವುದು ಉದ್ದೇಶದಿಂದ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ನಿರ್ವಿುಸುವ ಉದ್ಯಮಿಗಳಿಗೆ ರಿಯಾಯಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರೊ. ಹುಗ್ಗಿಯವರು 2004ರಲ್ಲಿ ನರ್ಮದಾ ಮಾಹೇ ಯೋಜನೆ ಅಭ್ಯಾಸ ಮಾಡುವಾಗ ಸುಮಾರು 2 ಸಾವಿರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು 600 ಕಿ.ಮೀ ದೂರ ಪೈಪ್​ಲೈನ್ ಮೂಲಕ ನೀರು ಕೊಡುವ ಉದ್ದೇಶ ಹೊಂದಿದ್ದರು. ಆದರೆ ನದಿ ನೀರು ಬಳಸಿಕೊಂಡು ನೀರಾವರಿ ಮಾಡಲು ಸಾಧ್ಯವಿರಲಿಲ್ಲ. ಆಗ ಉಗ್ಗಿಯವರು ನದಿ ನೀರನ್ನು ಕೆರೆ, ಹಳ್ಳ, ಕೊಳ್ಳಗಳಿಗೆ ತುಂಬಿಸಿಕೊಂಡರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು. ಈ ಯೋಜನೆ ಜಾರಿಗೆ ನಾವು ಸತ್ಯಗ್ರಹ ಮಾಡಿದಾಗ ಬಹಳಷ್ಟು ಜನ ಗೇಲಿ ಮಾಡಿದ್ದರು. ಆದರೆ ಅಂದಿನ ಹೋರಾಟದ ಫಲವಾಗಿ ಇಂದು ರಾಜ್ಯದ ನಾಲ್ಕೈದು ಸಾವಿರ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಜಗಳೂರು ಕ್ಷೇತ್ರದಲ್ಲೂ 57 ಕೆರೆಗಳಿಗೆ ನೀರು ಬಂದಿದ್ದು ಯೋಜನೆ ಸಾರ್ಥಕವಾದಂತಾಗಿದೆ ಎಂದು ತಿಳಿಸಿದರು.

ನೀರಾವರಿ ಮಂತ್ರಿಯಾಗಿದ್ದಾಗ ಅನೇಕ ವರ್ಷಗಳಿಂದಲೂ ನೆನಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ಅಂದಿನ ಎಂಪಿ ಜಯಪ್ರಕಾಶ್ ಹೆಗಡೆ ಜತೆಗೂಡಿ ಅಜ್ಜಂಪುರಲ್ಲಿದ್ದ ರೈತರು ವಿರೋಧಿಸಿದ್ದರು. ನಂತರ 800 ಕೋಟಿ ರೂ. ಯೋಜನೆ ಕೊಟ್ಟಾಗ ಅನುಮತಿ ನೀಡಿದರು. ನನ್ನ ಅವಧಿಯಲ್ಲಿ ವಾಣಿವಿಲಾಸ ಸಾಗರಕ್ಕೆ ನೀರು ತಲುಪಿಸಬೇಕು ಅಂದುಕೊಂಡಿದ್ದೆ. ಆದರೆ 7.5 ಕಿಮೀ ಪೆನಲ್​ನಲ್ಲಿ 6.ಕಿಮೀ ಮುಗಿಸಲಾಯಿತು. ಜತೆಗೆ ಉಳಿದ ಜಾಗ ಕುಸಿದಿದ್ದರಿಂದ ವಿಳಂಬವಾಗಿದ್ದು, ನಂತರ ಬಂದ ಸರ್ಕಾರ ಅದನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ರಾಜ್ಯದ ಮುಂದಿನ ಸಿಎಂ ಎಂ.ಬಿ. ಪಾಟೀಲ್ ಎಂದ ಅವರು, ಹಿಂದುಳಿದ ತಾಲೂಕಿನ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲು ಸಚಿವರ ಸಹಕಾರವಿದೆ. ಎಂ.ಬಿ ಪಾಟೀಲ್ ಅವರ ಕಾಳಜಿಯಿಂದ ಇಂದು ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ತಾಪಂ ಮಾಜಿ ಅಧ್ಯಕ್ಷ ಸಣ್ಣ ಸೂರಯ್ಯ, ಪಲ್ಲಾಗಟ್ಟೆ ಶೇಖರಪ್ಪ, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಪ್ರಕಾಶ್ ಗೌಡ್ರು ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net