

ಆನೇಕಲ್: ತಾಲೂಕಿನ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಚಟುವಟಿಕೆಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಶನಿವಾರ ಸ್ಥಳ ಪರಿಶೀಲಿಸಿದರು.
ಜಾಗವನ್ನು ಹಲವಾರು ವರ್ಷಗಳ ಹಿಂದೆ ಕೃಷಿ ತರಬೇತಿ ಕೇಂದ್ರಕ್ಕೆ ವೆಂಕಟರಮಣ ಶಾಸ್ತ್ರಿ ಎಂಬುವವರು ದಾನವಾಗಿ ನೀಡಿದ್ದು, ಜಾಗಕ್ಕೆ ಅವರ ಹೆಸರಿಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು. ರೈತರಿಗೆ ಸಾಧ್ಯವಾದಷ್ಟು ಸಹಾಯ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುವ ಚಿಂತನೆ ನಡೆಸುತ್ತೇವೆ. ಈ ಭಾಗದಲ್ಲಿ ಹೆಚ್ಚು ತರಕಾರಿ, ಹೂವು ಬೆಳೆಯುವ ರೈತರಿದ್ದು, ಸೂಕ್ತ ಮಾರುಕಟ್ಟೆ ಕಲ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ರೈತರಿಗೆ ಗುಣಮಟ್ಟದ ಟಾರ್ಪಾಲ್ ನೀಡದಿದ್ದರೆ ಅಂತಹ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಎಂದು ಎಚ್ಚರಿಸಿದರು.
ರಾಮಕೃಷ್ಣ ಪುರದ ಸುತ್ತಮುತ್ತಲ ಭೂಮಿ ವೀಕ್ಷಿಸಿದ ನಂತರ ಬೊಮ್ಮಸಂದ್ರ ಸಮೀಪದ ಕಿತ್ತಗಾನಹಳ್ಳಿಯಲ್ಲಿರುವ ಸರ್ಕಾರಿ ಭೂಮಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಕೃಷಿ ಇಲಾಖೆ ಅಪಾರ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಸ್.ಆರ್.ಟಿ. ಅಶೋಕ್, ಎನ್.ಶಂಕರ್, ಜಯಪ್ರಕಾಶ್, ಬೆಂಗಳೂರು ನಗರ ಜಿಲ್ಲಾ ದಕ್ಷಿಣ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಯನಹಳ್ಳಿ ಮುನಿರಾಜುಗೌಡ, ಬೆಂಗಳೂರು ನಗರ ಜಿಪಂ ಸದಸ್ಯರಾದ ಬಂಡಾಪುರ ರಾಮಚಂದ್ರ, ನಾಗೇಶ್‌ರೆಡ್ಡಿ, ಆನೇಕಲ್ ಮಂಡಲ ರೈತ ಮೋರ್ಚಾ ಅಧ್ಯಕ್ಷ ತಿಮ್ಮರಾಜು ಮತ್ತಿತರರು ಹಾಜರಿದ್ದರು.
ಕೆಸರಿನಲ್ಲಿ ಹೂತ ಕಾರು: ಕೃಷಿ ಸಚಿವರ ಬೆಂಗಾವಲು ಪಡೆಯ ಕಾರು ಕೆಸರಿನಲ್ಲಿ ಹೂತು ಕೆಲವೊತ್ತು ತೊಂದರೆ ಪಡಬೇಕಾಯಿತು, ನಂತರ ಮುಖಂಡರು ಹಾಗೂ ಪೊಲೀಸರ ಸಹಕಾರದಿಂದ ಕಾರನ್ನು ರಸ್ತೆಗೆ ತಳ್ಳಿಕೊಂಡು ಬರಲಾಯಿತು.