

ಮೈಸೂರು: ನಗರದ ಪುರಭವನ ಆವರಣದಲ್ಲಿ ನಿರ್ಮಾಣಗೊಂಡಿರುವ ಪಾರ್ಕಿಂಗ್ ಕಟ್ಟಡ ಅಂತೂ ಇಂತೂ ಸಾರ್ವಜನಿಕರ ಬಳಕೆಗೆ ಮುಕ್ತಗೊಂಡಿದೆ. ಇದರೊಂದಿಗೆ, ಇದಕ್ಕೆ ದಶಕದಿಂದ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ.
ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣವನ್ನು ಪಾಲಿಕೆ ಕೈಗೆತ್ತಿಕೊಂಡಿತ್ತು. 18.28 ಕೋಟಿ ರೂ. ವೆಚ್ಚದಲ್ಲಿ 2011ರಲ್ಲಿ ಆರಂಭಿಸಿದ ಈ ಕಾಮಗಾರಿ ಇದೀಗ 12 ವರ್ಷವಾದ ಬಳಿಕ ಪೂರ್ಣಗೊಂಡಿದೆ.
ಕಾಮಗಾರಿ ಅನೇಕ ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಕಾಮಗಾರಿಯನ್ನು ಹೈದರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2011ರ ಏಪ್ರಿಲ್ 29ರಂದು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಗಿತ್ತು. ನಿಯಮಾನುಸಾರ 2012ರ ಏಪ್ರಿಲ್ ಒಳಗೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಗಡುವು ಮೀರಿದ್ದರೂ ಕೆಲಸ ಮುಗಿಸದ ಸಂಸ್ಥೆ, ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳ ನೆಪವೊಡ್ಡಿತ್ತು. ಜತೆಗೆ, ಹೆಚ್ಚುವರಿ ಬಜೆಟ್ ನೀಡುವಂತೆ ಕಾಮಗಾರಿ ಸ್ಥಗಿತಗೊಳಿಸಿತ್ತು. ಹೆಚ್ಚುವರಿ ಅನುದಾನ ನೀಡುವ ಪ್ರಸ್ತಾವನೆಯನ್ನು ಪಾಲಿಕೆ ತಿರಸ್ಕರಿಸಿತ್ತು. ಬಳಿಕೆ ಗುತ್ತಿಗೆದಾರ ಪರಾರಿಯಾದ್ದರಿಂದ ಛಾಬ್ರಿಯಾ ಸಂಸ್ಥೆಯನ್ನು ಪಾಲಿಕೆ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೆ, ಈ ಪ್ರಕ್ರಿಯೆ ನಡೆಯುವ ಮುನ್ನವೇ ಛಾಬ್ರಿಯಾ ಸಂಸ್ಥೆಗೆ ಪಾಲಿಕೆ 10.86 ಕೋಟಿ ರೂ. ಪಾವತಿಸಿತ್ತು.
ಗುತ್ತಿಗೆದಾರ ಕೈಕೊಟ್ಟ ಹಿನ್ನೆಲೆಯಲ್ಲಿ ಪಾಲಿಕೆ 2017ರಲ್ಲಿ ತುಂಡು ಗುತ್ತಿಗೆ ಮೂಲಕ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿತ್ತು. ಇದಕ್ಕಾಗಿ ಸ್ಥಳೀಯ ಗುತ್ತಿಗೆದಾರನ ಮೂಲಕ ಕಾಮಗಾರಿ ಆರಂಭಿಸಿತ್ತು. ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ನಿರ್ಮಿಸಬೇಕಾಗಿದ್ದ ಸ್ಥಳದಲ್ಲಿ ತೋಡಲಾಗಿದ್ದ ಗುಂಡಿಯಲ್ಲಿ ಎರಡು ಪಿಲ್ಲರ್‌ಗಳನ್ನಷ್ಟೇ ಹೊಸದಾಗಿ ಹಾಕಲಾಗಿತ್ತು. ಆದರೆ, ಛಾಬ್ರಿಯಾ ಸಂಸ್ಥೆ ಈ ಕೆಲಸಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ಇದರಿಂದಾಗಿ ಈ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ನಡುವೆ, ‘ದಸರಾ ಹೊತ್ತಿಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಎಂದು ಪ್ರತಿ ವರ್ಷವೂ ಭರವಸೆ ನೀಡಲಾಗಿತ್ತು. ಆದರೆ, ಅದು ಸಾಕಾರಗೊಂಡಿರಲಿಲ್ಲ. ಇದೀಗ ಪಾಲಿಕೆ ವಿವಿಧ ಅಡೆತಡೆಗಳನ್ನು ನಿವಾರಿಸಿಕೊಂಡಿದ್ದು, ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪಾರ್ಕಿಂಗ್ ಕಟ್ಟಡವನ್ನು ಬುಧವಾರ ಉದ್ಘಾಟಿಸಿದರು.
ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯ ಜನರಿಗೆ ತಮ್ಮ ವಾಹನವನ್ನು ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ವ್ಯವಸ್ಥಿತವಾಗಿ ನಿರ್ಮಿಸಿರುವ ವಾಹನ ನಿಲ್ದಾಣ ಎಲ್ಲರಿಗೂ ಉಪಯೋಗವಾಗಲಿದೆ ಎಂದು ಅವರು ಹೇಳಿದರು.
ಇಲ್ಲಿ 400ಕ್ಕೂ ಹೆಚ್ಚ ವಾಹನಗಳನ್ನು ನಿಲುಗಡೆ ಮಾಡಬಹುದು. ಮುಂದಿನ ದಿನಗಳಲ್ಲಿ 2 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಕೆ.ಹರೀಆದದಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಜಿ.ಸೋಮಶೇಖರ್, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.