

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ 371(ಜೆ) ಕಲಂ ಅನುಷ್ಠಾನದಿಂದ ಎಷ್ಟು ಪ್ರಯೋಜನವಾಗಿದೆ ಎಂಬುದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಯ 20.50 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಸಿಂಧನೂರಿನ ನಡಿಗೆ ಸ್ವಾತಂತ್ರ್ಯೋತ್ಸವದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 371(ಜೆ) ಕಲಂ ಅನುಷ್ಠಾನ ಮಾಡಲಾಯಿತು. 2012 ರಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಅನುಷ್ಠಾನಕ್ಕೆ ಮುನ್ನುಡಿ ಬರೆದಿದ್ದರ ಪ್ರಯತ್ನದ ಫಲವಾಗಿ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಇತರ ಸೀಟುಗಳಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವಂತಾಗಿದೆ ಎಂದರು.
ಶೇ.75 ರಿಂದ 80, 85ರ ಅನುಪಾತದಲ್ಲಿಯೂ ಹೆಚ್ಚಿನ ಸೀಟುಗಳು ಪಡೆಯಲು ಅನುಕೂಲವಾಗಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ನಮ್ಮ ನಿಲುವಾಗಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಪ್ರಾಮಾಣಿಕತೆ, ಸರಳತೆಯಿಂದ ಸಾಧನೆ ಮಾಡಬೇಕೆಂದರು.
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಮಾತನಾಡಿ, 371(ಜೆ) ಕಲಂ ಅನುಷ್ಠಾನದ ಆರಂಭದಲ್ಲಿಯೇ 480 ವೈದ್ಯಕೀಯ ಸೀಟು ಮೀಸಲಾತಿ ದೊರೆಯಿತು. 2023 ರಲ್ಲಿ 1320 ವೈದ್ಯಕೀಯ ಸೀಟುಗಳು ಲಭ್ಯವಾಗಿವೆ. ದಶಕದಲ್ಲಿ ಸಾವಿರಾರು ಹುದ್ದೆಗಳಲ್ಲಿ 30 ಸಾವಿರ ಹುದ್ದೆಗಳು ನಮ್ಮ ಭಾಗದವರಿಗೆ ಸಿಕ್ಕಿರುವುದು ಸಂತಸದ ವಿಷಯವಾಗಿದೆ. ನಂತರದ ಸರ್ಕಾರದ ಅವಧಿಯಲ್ಲಿ ಈ 371(ಜೆ) ಕಲಂ ಅಷ್ಟಾಗಿ ಲಾಭ ನೀಡಿಲ್ಲ. ಸರ್ಕಾರ ನೇಮಕಾತಿ ವಿಚಾರದಲ್ಲಿ ನಿರ್ಲಕ್ಷೃ ತೋರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ತ್ಯಾಗ-ಬಲಿದಾನದಿಂದ ಪಡೆದ ಸ್ವಾತಂತ್ರ್ಯ ಉಳಿಸುವಲ್ಲಿ ನಮ್ಮ ಪ್ರಯತ್ನ ಇರಬೇಕು. ವಿದ್ಯಾರ್ಥಿ ಯುವಜನರಲ್ಲಿ ಸ್ವಾತಂತ್ರ್ಯದ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಸಿಂಧನೂರು ನಡಿಗೆ ಸ್ವಾತಂತ್ರ್ಯದ ಕಡೆಗೆ ಪಂಥ ಸಂಚಲನ, ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಪಾರದರ್ಶಕ ಆಡಳಿತ ನೀಡುತ್ತಿದೆ. ಶಿಕ್ಷಣದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಪುರ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ಜಿಪಂ ಸಿಇಒ ಅವಿನಾಶ ಶಿಂಧ್ಯಾ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ, ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ ಜಹಗೀರದಾರ ಇನ್ನಿತರರಿದ್ದರು.