ರಾಹುಲ್ ಗಾಂಧಿಯಿಂದ ಮತಗಳ್ಳತನದ ಆರೋಪ,  ಮತದಾರರ ಪಟ್ಟಿ ಅಳಿಸಿ ಹಾಕಲು ಕಾರಣವೇನು ಎಂದ ಸಚಿವ ಡಾ.ಎಂ.ಬಿ. ಪಾಟೀಲ

M B Patil
Published on

ವಿಜಯಪುರ: ಮತದಾರರ ಪಟ್ಟಿಯನ್ನು ಡಿಜಿಟಲ್ ಮಾದರಿಯಲ್ಲಿ ಕೊಡಿ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒತ್ತಾಯ ಮಾಡುತ್ತಿದ್ದಂತೆ 45 ದಿನಗಳಲ್ಲಿಯೇ ಮತದಾರರ ಪಟ್ಟಿ ಅಳಿಸಿ ಹಾಕಲಾಗಿದೆ. ತರಾತುರಿಯಲ್ಲಿ ಅಳಿಸಿ ಹಾಕಲು ಕಾರಣವೇನು? ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಿದರೆ ಚುನಾವಣೆ ಆಯೋಗದ ನಕಲಿ ಕುರಿತು ಎಲ್ಲವೂ ಸ್ಪಷ್ಟವಾಗಲಿದೆ. ಎಲ್ಲೆಲ್ಲಿ ಅಕ್ರಮವಾಗಿದೆ ಎಂಬುದು ತಿಳಿದು ಬರಲಿದೆ. ಹೀಗಾಗಿ ಡಿಜಿಟಲ್ ಮಾದರಿಯಲ್ಲಿ ಮಾಹಿತಿ ನೀಡುತ್ತಿಲ್ಲ. ಹಾಗೊಂದು ವೇಳೆ ಪಾರದರ್ಶಕವಾಗಿ ಚುನಾವಣೆ ನಡೆದಿದ್ದರೆ ಡಿಜಿಟಲ್ ಮಾದರಿಯಲ್ಲಿ ಮಾಹಿತಿ ನೀಡಲು ಹಿಂಜರಿಕೆ ಏಕೆ? ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಮರು ಪ್ರಶ್ನೆ ಹಾಕಿದರು.

ಮತದಾರರ ಮಾಹಿತಿಯನ್ನು ಕನಿಷ್ಠ 5 ವರ್ಷವಾದರೂ ಸಂಗ್ರಹಿಸಿ ಇಡಬೇಕು. ಆದರೆ, ತರಾತುರಿಯಲ್ಲಿ ಅಳಿಸಿ ಹಾಕಲಾಗಿದೆ. ಮಹಾದೇವಪುರ ಕ್ಷೇತ್ರ ಕೇವಲ ಉದಾಹರಣೆಯಷ್ಟೆ. ಡಿಜಿಟಲ್ ಮಾದರಿಯಲ್ಲಿ ಮಾಹಿತಿ ನೀಡಿದರೆ 524 ಕ್ಷೇತ್ರಗಳ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.

ಕೇವಲ 10*10 ಸುತ್ತಳತೆಯ ಮನೆಯಲ್ಲಿ 80 ಮತದಾರರ ವಿಳಾಸವಿದೆ. ಆ ಮನೆಯ ಮಾಲೀಕ ಬಿಜೆಪಿ ಬೆಂಬಲಿಗ. ಅಂಥ ಮನೆಯಲ್ಲಿ ಇಷ್ಟು ಜನರು ಇರೋಕೆ ಸಾಧ್ಯವೇ? ಸಾಧ್ಯ ಇದ್ದರೆ ದೇಶದಲ್ಲಿ ವಸತಿ ಸಮಸ್ಯೆ ಬಗೆ ಹರಿದಂತೆ ಎಂದರು.

ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸಂವಿಧಾನಿಕ ಹುದ್ಧೆ ಹೊಂದಿದ್ದಾರೆ. ಅವರಿಗೆ ಅಫಿಡವಿಟ್ ಕೇಳುತ್ತೀರುವುದು ಹಾಸ್ಯಾಸ್ಪದ. ಚುನಾವಣೆಯಲ್ಲಿ ನಿಗದಿತ ಮತಗಳ ಮಾರ್ಜಿನ್ ದಾಟಿದವರು ಗೆದ್ದಿದ್ದಾರೆ. ಸಂಸತ್‌ನಲ್ಲಿ 25 ರಿಂದ 30 ಸ್ಥಾನಗಳು ನ್ಯಾರೋ ಮಾರ್ಜಿನ್‌ನಲ್ಲಿವೆ. ಅಂಥವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಎಲ್ಲವೂ ಅಕ್ರಮ ಆಗಿರುವ ಸಾಧ್ಯತೆ ಇದೆ. ಕೆಲವು ಪ್ರತಿಶತ ಮತಗಳನ್ನು ಕೇಂದ್ರೀಕರಿಸಿ ಈ ರೀತಿ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net