

ಆಷಾಢ ಶುಕ್ರವಾರದ ದಿನಗಳಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕೂಡಲೇ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಈ ಬಾರಿಯ ಆಷಾಢ ಶುಕ್ರವಾರ ಆಚರಣೆ ಸಂಬಂಧ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಆಷಾಢ ಮಾಸ ಹಿನ್ನೆಲೆ ನಗರದ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪ್ರತಿ ಶುಕ್ರವಾರದಂದು ವಿಶೇಷ ಪೂಜೋತ್ಸವ ನಡೆಯಲಿದ್ದು, ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ, ಯಾವುದೇ ಸಮಸ್ಯೆ ಆಗದಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಈ ಬಾರಿ ಜೂ.23, 30, ಜು.7 ಹಾಗೂ ಜು.14ರಂದು ಆಷಾಢ ಶುಕ್ರವಾರ ಬರಲಿದ್ದು, ಜು.10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ಇರಲಿದೆ. ಮಹಿಳೆಯರಿಗೆ ಪ್ರತ್ಯೇಕ ಸಾಲಿನಲ್ಲಿ ದರ್ಶನ ಕ್ಕೆ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಿ. ದಾಸೋಹದಲ್ಲಿ ಲೋಪವಾಗದಂತೆ ನಿಗಾವಹಿಸಿ. ತುರ್ತುಪರಿಸ್ಥಿತಿ ನಿರ್ವಹಿಸಲು ಬೆಟ್ಟದ ಮೇಲೆ ಸದಾ ಪೊಲೀಸ್ ಜೀಪ್, ಆಂಬುಲೆನ್ಸ್ ಇರಲಿ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಹೀಗಾಗಿ ಭಕ್ತರಿಗೆ ಯಾವುದೇ ಅಡಚಣೆ ಉಂಟಾಗದಂತೆ ಕೆಲಸ ನಿರ್ವಹಿಸಿ. ಈ ಹಿಂದೆ ನಡೆದಿರುವ ಕ್ರಮಗಳನ್ನು ಅನುಸರಿಸಿ. ಆದರೆ ಯಾವುದರಲ್ಲಿ ಲೋಪವಿದೆಯೋ ಅ