ಪ್ರತ್ಯೇಕ ಟೌನ್‌ಶಿಪ್ ನಿರ್ಮಾಣಕ್ಕೆ ಚಿಂತನೆ: ಸಚಿವ ಡಾ.ಎಚ್.ಸಿ.ಮಹದೇವಪ್ಪ

1
Published on

ಮೈಸೂರು: ಅಂಬೇಡ್ಕರ್ ಬಡಾವಣೆಯಲ್ಲಿ ವಾಸಿಸುವ ಜನರಿಗೆ ಪ್ರತ್ಯೇಕ ಟೌನ್‌ಶಿಪ್ ನಿರ್ಮಾಣ ಮಾಡಲು ಅಗತ್ಯ ಇರುವ ಭೂಮಿ ಹುಡುಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಅಶೋಕಪುರಂ 13ನೇ ಕ್ರಾಸ್‌ನಲ್ಲಿ ವಿಶ್ವಮಾನವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಸಂಘದ ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಅಶೋಕಪುರಂ ಪ್ರದೇಶದ ಜನರು ಶ್ರಮಜೀವಿಗಳು. ಅಂದಿನ ಜನಸಂಖ್ಯೆಗೆ ತಕ್ಕಂತೆ ಮನೆಗಳು ಇದ್ದು, ಈಗ ಜನಸಂಖ್ಯೆ ಹೆಚ್ಚಿರುವ ಕಾರಣ ಮನೆಗಳಲ್ಲಿ ವಾಸಿಸಲು ತೊಂದರೆಯಾಗಿದೆ. ಹಾಗಾಗಿ ಭೂಮಿ ಇದ್ದರೆ ಟೌನ್‌ಶಿಪ್ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ನಗರದ ಒಳಗೆ ಅಥವಾ ಹೊರ ಭಾಗದಲ್ಲಿ 20 ಎಕರೆ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿ, ತಹಸೀಲ್ದಾರ್, ಎಂಡಿಎ ಆಯುಕ್ತರಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಅಶೋಕಪುರಂ ಬಡಾವಣೆಯ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲ ಎನ್ನುವುದಿಲ್ಲ. ಅದಕ್ಕಾಗಿ ಮುಂದೆ ಅನುದಾನ ಕೊಡಲು ಹಿಂಜರಿಯುವುದಿಲ್ಲ. ಈ ಹಿಂದೆ ಅಶೋಕಪುರಂನ ನಿವಾಸಿಗಳ ಮನೆಯ ವಿದ್ಯುತ್ ಬಿಲ್ ಹೆಚ್ಚು ಬಂದಿದ್ದರಿಂದ ಒಂದೇ ಬಾರಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಿಂದ ಮನ್ನಾ ಮಾಡಿಸಿಕೊಡಲಾಗಿದೆ. ಇದರಿಂದಾಗಿ ಇಂದು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗಿದೆ ಎಂದರು.

ಸಮುದಾಯ ಭವನ ನವೀಕರಣಕ್ಕೆ 1 ಕೋಟಿ ರೂ.ಅನುದಾನ ಕೊಡಲಾಗುವುದು. ನಗರದ ಅಂಬೇಡ್ಕರ್ ಭವನ ನಿರ್ಮಾಣ ಪೂರ್ಣಕ್ಕೆ 20 ಕೋಟಿ ರೂ.ಮಂಜೂರು ಮಾಡಿಸಿ ಟೆಂಡರ್ ಕರೆದು ಒಪ್ಪಿಗೆ ಕೊಡಲಾಗಿದೆ. ದೇಶಕ್ಕೆ ರಕ್ಷಣಾ ಕವಚ ಅಂಬೇಡ್ಕರ್ ರಚಿಸಿದ ಸಂವಿಧಾನ ಆಗಿದೆ. ಆದರೆ, ಇಂತಹ ಸಂವಿಧಾನವನ್ನು ಬದಲಿಸುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಸಂವಿಧಾನ ಬದಲಿಸಿ ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ ಸುಟ್ಟು ಹೋಗುತ್ತಾರೆ ಎಂದು ಎಚ್ಚರಿಸಿದರು.

ಜನರಿಗೆ ಇಂದು ಮುಖ್ಯವಾಗಿ ಬೇಕಿರುವುದು ಅನ್ನ, ಆರೋಗ್ಯ ಮತ್ತು ಸಮಾನತೆ. ಅದನ್ನು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದೆ. 1924ರಲ್ಲಿ ಅಂಬೇಡ್ಕರ್ ಅವರು ಬಹಿಷ್ಕೃತ ಹಿತಕಾರಿಣಿ ಸಭಾ ಸ್ಥಾಪಿಸಿ ಶೋಷಿತರು, ತುಳಿತಕ್ಕೊಳಗಾದವರು ಸಂಘಟಿತರಾಗಬೇಕು ಎನ್ನುವುದನ್ನು ಹೇಳಿದ್ದರು ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವಾಗಿದೆ. ಬಹಳಷ್ಟು ವರ್ಷಗಳ ಕಾಲದಿಂದ ಅಲಿಖಿತ ಸಂವಿಧಾನದ ಆಡಳಿತದ ವಿರುದ್ಧ ಅಂಬೇಡ್ಕರ್ ಸಂವಿಧಾನ ಕೊಟ್ಟು ಸಮಾನತೆ ಸಮಾಜ ನಿರ್ಮಾಣದ ಆಶಯವನ್ನು ಕಂಡರು. ಕೇಂದ್ರ ಸರ್ಕಾರ ಮತ್ತೊಮ್ಮೆ ಮನುಸ್ಮತಿ ಆಡಳಿತವನ್ನು ತರಲು ಮುಂದಾಗಿದೆ ಎಂದು ಕಿಡಿಕಾರಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದಲಿತರಿಗಾಗಿ ಒಂದು ಶಿಕ್ಷಣ ಸಂಸ್ಥೆ ಇಲ್ಲ. ಹಾಗಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಆರು ಎಕರೆ ಜಾಗ ಮಂಜೂರು ಮಾಡಿಸಿ, ಶಿಕ್ಷಣ ಸಂಸ್ಥೆ ತೆರೆಯಲು ಸರ್ಕಾರದಿಂದ ಅಗತ್ಯ ನೆರವು ಕೊಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ನಗರಪಾಲಿಕೆ ಮಾಜಿ ಸದಸ್ಯರಾದ ಭುವನೇಶ್ವರಿ, ಪಲ್ಲವಿ ಬೇಗಂ, ವಿಶ್ವ ಮಾನವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಅಧ್ಯಕ್ಷ ಎಂ.ದೊಡ್ಡ ಸಿದ್ದಯ್ಯ, ಆದಿ ಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಪಿ.ಸಿದ್ದರಾಜು, ಚಿಕ್ಕಗರಡಿ ಸಂಘದ ಅಧ್ಯಕ್ಷ ಬಿ.ನಾಗರಾಜು, ದೊಡ್ಡ ಗರಡಿ ಸಂಘದ ಅಧ್ಯಕ್ಷ ಆರ್.ಸಿ.ಮಹೇಶ್, ಪಿ.ಟಿ.ಕೃಷ್ಣ, ಅಶೋಕಪುರಂ ರವಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net