

ಮಂಡ್ಯ: ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯ ಅವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದ ಕಾರಣ ನೀರು ಅವರಿಗೆ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಮೇಲಿರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎನ್ನುವುದು ಗೊತ್ತಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಕೆಆರ್‌ಎಸ್‌ನಲ್ಲಿ ಮಾತನಾಡಿದ ಅವರು, ಮಳೆ ಇದೇ ರೀತಿ ಉತ್ತಮವಾಗಿ ಬಂದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಈ ವರ್ಷ ನೀಡಬಹುದು. ಕಳೆದ ವರ್ಷ 223 ತಾಲೂಕಿನಲ್ಲಿ ಬರ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ವಿಪಕ್ಷಗಳು ಟೀಕೆ ಮಾಡಿದ್ದವು. ಆದರೂ ನಾವು ಜನಪರವಾಗಿ ಕೆಲಸ ಮಾಡಿದೆವು. ಏಕೆಂದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಯಾರನ್ನೂ ನಾನು ಟೀಕೆ ಮಾಡುವುದಿಲ್ಲ. ನಮ್ಮ ಕೆಲಸಗಳು ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತವೆ. ಇನ್ನು ಮುಂದಿನ ವರ್ಷದಿಂದ ಬಾಗಿನ ಸಲ್ಲಿಕೆ ವೇಳೆ ಐವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಮೂವರು ನೀರುಗಂಟಿ ಹಾಗೂ ಇಬ್ಬರು ಕಿರಿಯ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದರು.
ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಕಳೆದ ವರ್ಷ ನಾಲೆಗಳನ್ನು ಆಧುನೀಕರಣಗೊಳಿಸಲಾಗಿದೆ. ನಾಲೆಯ ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂದು 1964-65ರ ಕಾನೂನಿಗೆ ತಿದ್ದುಪಡಿ ತಂದು ಈ ಬಾರಿಯ ವಿಧಾನಸಭೆಯಲ್ಲಿ ಮಂಡನೆ ಮಾಡಿ ಹೊಸ ಕಾನೂನು ತಂದಿದ್ದೇವೆ. ರೈತರ ಬದುಕು ಹಸನಾಗಬೇಕು ಎಂದು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎನ್ನುವ ಕನಸನ್ನು ಸಚಿವ ಚಲುವರಾಯಸ್ವಾಮಿ ಅವರು ಹೊಂದಿದ್ದಾರೆ. ಇದು ಜಿಲ್ಲೆಯ ರೈತರ ಬದುಕಿಗೆ ದೊಡ್ಡ ಮಾರ್ಗದರ್ಶನ ಸಿಗಲಿದೆ. ರೈತನಿಗೆ ಬಡ್ತಿ, ಸಂಬಳ, ನಿವೃತ್ತಿ ಎಂಬುದಿಲ್ಲ. ಆದ ಕಾರಣಕ್ಕೆ ರೈತರನ್ನು ನಾವು ಉಳಿಸಬೇಕಿದೆ ಎಂದರು.
ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಅಣೆಕಟ್ಟು ಪರಿಹಾರ ಎಂದು ನಾವು ಪಾದಯಾತ್ರೆ ಮಾಡಿದ್ದೆವು. ನಮ್ಮ ಎದುರು ಪಕ್ಷದವರು ಕೋವಿಡ್ ಕಾರಣ ಹೇಳಿ ಪಾದಯಾತ್ರೆಗೆ ತಡೆ ಹಾಕಿದರು. ಯಾರೇ ಏನೇ ತಡೆ ಹಾಕಿದರೂ ಪಾದಯಾತ್ರೆ ಸಂಪೂರ್ಣ ಮಾಡುತ್ತೇವೆ ಎಂದು ಬೆಂಗಳೂರಿನ ತನಕ ಹೆಜ್ಜೆ ಹಾಕಿದೆವು. ಕಾವೇರಿ ತೀರದ ಎಲ್ಲ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನ ಸೇವೆಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಜನರ ಋಣ ತೀರಿಸುತ್ತೇವೆ. ನಮ್ಮ ಮೇಲೆ ವಿಶ್ವಾಸವಿರಲಿ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ ಅವರ ಪಾಲಿನ 177 ಟಿಎಂಸಿ ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆ.ವ್ಯಾ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಲಯ ಅನುವು ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೃಂದಾವನ ಅಣೆಕಟ್ಟಿಗೆ ಮೈಸೂರು ಮಹಾರಾಜರು ಅದ್ಬುತವಾಗಿ ನಿರ್ಮಾಣ ಮಾಡಿದ್ದರು. ಗುಂಡೂರಾವ್ ಅವರು ಇದಕ್ಕೆ ಹೊಸರೂಪ ನೀಡಿದರು. ಪ್ರವಾಸೋದ್ಯಮವನ್ನು ಗುರಿಯಾಗಿಟ್ಟುಕೊಂಡು ಪಿಪಿಪಿ ಮಾದರಿಯಲ್ಲಿ ಹೊಸ ರೂಪ ನೀಡಲು ನಮ್ಮ ಸರ್ಕಾರ ಹೊರಟಿದೆ. ಗಂಗಾ ಆರತಿಗಿಂತ ಮಿಗಿಲಾಗಿ ಪ್ರತಿವಾರ ಕಾವೇರಿ ಆರತಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಪ್ರಾರಂಭ ಮಾಡಲಾಗುವುದು. ಈಗಾಗಲೇ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಾವೇರಿ ಜಲಾನಯದ ಪ್ರದೇಶದ ಶಾಸಕರ ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಸೇರಿಸಿ ಸಮಿತಿ ರಚಿಸಲಾಗಿದೆ ಎಂದರು.
ಬೃಂದಾವನಕ್ಕೆ ಹೊಸ ರೂಪ ನೀಡುವ ಮೊದಲು ನಮ್ಮ ಜತೆ ಚರ್ಚೆ ನಡೆಸಿ ಎಂದು ರೈತರು ಹೇಳಿದ್ದಾರೆ. ಯಾವುದೇ ಮುಚ್ಚುಮರೆಯಿಲ್ಲದೇ ಇದರ ಅಭಿವೃದ್ಧಿ ಮಾಡಲಾಗುವುದು. ಅವರ ಜತೆ ಚರ್ಚೆ ನಡೆಸಲಾಗುವುದು. ಯಾರ ಜಮೀನು ವಶಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಜಮೀನಿನಲ್ಲೇ ಅಭಿವೃದ್ಧಿ ಮಾಡಲಾಗುವುದು. ಇಷ್ಟವಿದ್ದವರು ಜಮೀನು ನೀಡಬಹುದು, ಯಾರಿಗೂ ಒತ್ತಾಯ ಮಾಡುವುದಿಲ್ಲ. ಅಣೆಕಟ್ಟಿನ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದ ಡಿಸಿಎಂ ಡಿಕೆಶಿ, ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು. ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ ಎಂದು ಹೇಳಿದರು.